ಅನುದಿನ ಕವನ-೧೭೪೧, ಕವಿ: ಎ ಎನ್ ರಮೇಶ್, ಗುಬ್ಬಿ, ಕವನದ ಶೀರ್ಷಿಕೆ: ಜಾದೂ…!

“ಇದು ಒಲವಿನಂಬರದ ಬೆಳದಿಂಗಳ ಬಾಲೆಯ ಕಿರಣಗಳ ಸುಂದರ ಕವಿತೆ. ಅಪೂರ್ವ ಅನುರಾಗ ಬಾಲಿಕೆಯ ಪ್ರೇಮ ರಿಂಗಣಗಳ ಮಧುರ ಭಾವಗೀತೆ. ಈ ಪದ್ಯದ ಚರಣ ಚರಣದಲ್ಲು ಪ್ರೀತಿಯ ಹೂರಣವಿದೆ. ಸಾಲು ಸಾಲಿನಲ್ಲು ಒಲವಿನ ಚಾರಣವಿದೆ. ಪದ ಪದಗಳಲ್ಲು ಪ್ರೇಮದ ತೋರಣವಿದೆ. ಅಕ್ಷರ ಅಕ್ಷರದಲ್ಲು ಅನುರಾಗದ ಕಿರಣವಿದೆ. ಏನಂತೀರಾ..?                                   – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.

ಜಾದೂ..!

ಕಣ್ಣೋಟವೆಂಬ
ಲೇಖನಿಯಿಂದ
ಮೌನವೆಂಬ
ಶಾಯಿಯಿಂದ…

ಎದೆಯ ಶುಭ್ರ
ಹಾಳೆಯ ಮೇಲೆ
ಒಲವ ಮಹಾಭಾಷ್ಯ
ಬರೆದು ನಿಂತಿಹ
ರಮ್ಯ ಕಾವ್ಯಕನ್ನಿಕೆಯವಳು.!

ಏನನ್ನೂ ಹೇಳದೆ
ನನ್ನನ್ನೂ ಕೇಳದೆ
ಸುಳಿವನ್ನೂ ನೀಡದೆ
ಸದ್ದನ್ನೂ ಮಾಡದೆ…

ನಿಶ್ಯಬ್ದವಾಗಿಯೇ
ಅದ್ಯಾವ ಮಾಯದಲ್ಲೊ
ಗುಪ್ತಗಾಮಿನಿಯಾಗಿ
ಎದೆಯಾಳಕ್ಕಿಳಿದು ಕುಳಿತ
ದಿವ್ಯ ಯಕ್ಷಕಿನ್ನರಿಯವಳು.!

ಬರಿದೆ ಮೋಡಿಯಲ್ಲ
ಅನನ್ಯ ಗಾರುಡಿಯವಳು
ಬರೀ ಬೆಳದಿಂಗಳ ಕುಡಿಯಲ್ಲ
ಪದಾತೀತ ಭಾವದಾಂಗುಡಿಯವಳು.!

ಬರಿಯ ಪ್ರೇಮಕಿಡಿಯಲ್ಲ
ಅನುರಾಗಮೃತ ನುಡಿಯವಳು
ಬರೀ ಜನ್ಮಜನ್ಮದ ಜೋಡಿಯಲ್ಲ
ನರನರಕು ಸ್ವರವಾಗಿ ವರವಾದ
ಉಸಿರುಸಿರ ನಿತ್ಯಸತ್ಯ ಜೀವನಾಡಿಯವಳು!


-ಎ.ಎನ್.ರಮೇಶ್,  ಗುಬ್ಬಿ.
—–