ಅನುದಿನ ಕವನ-೧೭೪೪, ಕವಿ: ಸಿದ್ಧರಾಮ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್

ಗಜಲ್

ಮಧು ಬಟ್ಟಲಿಗೆ ದಾಹವಾಗಿದೆಯೇನೋ ಮಧುವ ಕೊಡುವೆಯಾ ಸಾಕಿ
ಎದೆಯಲೊಂದು ಬಾಣ ನಾಟಿದೆಯೇನೊ ನೋವನು ಆಲಿಸುವೆಯಾ ಸಾಕಿ

ಚುಕ್ಕೆ ಚಂದ್ರಮರೆಲ್ಲ ಆಗಸದಿ ತೇಲಾಡುತಿಹರು ಅವರಿಗೂ ನಶೆಯೇನೋ
ಜಗದ ಜಂಜಡ ಕಳೆದು ನಿಂತಿಹೆನು ಧ್ಯಾನಸ್ಥ ಮನವ ನೋಡುವೆಯಾ ಸಾಕಿ

ಅದೇಕೆ ಬರಿದಾದ ಜಾಂಬುಗಳೇ ಸದ್ದು ಮಾಡುತಿವೆ ಮಧುಶಾಲೆಯ ತುಂಬ
ಅದೆಷ್ಟು ಮನಸುಗಳು ಒಡೆದು ರೋದಿಸುತಿಹವೋ ಕಂಡಿರುವೆಯಾ ಸಾಕಿ

ಏನೂ ತಿಳಿಯದಿದ್ದರೂ ತಿಳಿದಂತೆ ಬಡಬಡಿಸುತಿಹರು ಹೊರಗಿರುವ ಜನರು
ಎಲ್ಲ ಅರಿತವರು ಅರಿಯದಂತಿಹರು ಮಧುಶಾಲೆಯಲಿ ಅರಿತಿರುವೆಯಾ ಸಾಕಿ

ಎಷ್ಟೋ ಬಣ್ಣಗಳನು ಬಳಿದುಕೊಂಡವರ ಮುಖಗಳನು ಕಂಡಿರುವನು ಸಿದ್ಧ
ಮತ್ತಿನಲಿರುವ ಪರಿಶುದ್ಧ ಮನಸುಗಳ ಪ್ರೇಮವನು ತಿಳಿದಿರುವೆಯಾ ಸಾಕಿ


-ಸಿದ್ಧರಾಮ ಕೂಡ್ಲಿಗಿ