ಒಮ್ಮೆ ಅಪ್ಪಿಕೊಂಡು ನೋಡಿ
ಯಾರನ್ನು ಎಂದು ನೀವೇ ನಿರ್ಧರಿಸಿ
ಅಪ್ಪುಗೆಯ ಬಿಸುಪನ್ನು, ಸೊಗಸನ್ನು ಅನುಭವಕ್ಕೆ ತಂದುಕೊಳ್ಳಲಾದರೂ
ಒಮ್ಮೆ ತಬ್ಬಿಕೊಂಡು ನಿಲ್ಲಿ
ಹಗೂರವಾಗಿ, ಬಿಗಿಯಾಗಿ
ಅಪ್ಪುವಾಗ ಏನಾಗುತ್ತದೆ ಹೇಳಿ
ಎದುರಲ್ಲಿರುತ್ತದೆ ಒಂದು ಆಕೃತಿ
ಶಿಲೆಯಂತೆ ನೀವಿರುತ್ತೀರಿ
ಅಮೂರ್ತವು ಕಲೆಯ
ಮೂರ್ತವಾಗಬೇಕೆಂದರೆ
ಉಳಿಯ ಅಪ್ಪುಗೆಯೂ ಸಿಗಬೇಕು
ಪೆಟ್ಟಿನಂತಲ್ಲ ಆವರಿಸಿ ಮುಟ್ಟಬೇಕು
ಅಪ್ಪುವಾಗ ಕೈಗಳೆರಡು ಚಾಚುತ್ತವೆ
ಕಣ್ಗಳು ಅರಳುತ್ತವೆ
ತುಟಿಯು ಅರೆ ಬಿರಿಯುತ್ತದೆ
ಬೆರಳುಗಳು ಆಚೆಗಿನ
ಬೆನ್ನು ತಡವುತ್ತವೆ
ಮೃದುವಾಗಿ, ಮೆದುವಾಗಿ
ನೇವರಿಸುತ್ತವೆ ಹಿಂದಲೆಯನ್ನು
ತಡಕುತ್ತದೆ ಆಪ್ತತೆಯನ್ನು
ಮರುಕಳಿಸುತ್ತದೆ ಪ್ರೇಮ
ಹಿಂಜರಿಕೆಯೊಂದು
ಮರೆಯಾಗಬಹುದು
ದ್ವೇಷವೊಂದು ಕೊನೆಯಾಗಬಹುದು
ಆ ತುದಿಯ ಕೊನೆಯು
ಈ ತುದಿಯ ಮೊನೆಗೆ ಸಿಲುಕಬಹುದು
ಧೂಮಕೇತುಗಳು ಸಹ
ಶಕುನದ ಶುಭ ನುಡಿಯಬಹುದು
ಬಂದೂಕಿನ ಮೊನೆಯು
ತುಕ್ಕು ಹಿಡಿಯುವಷ್ಟು ಅಪ್ಪಿಕೊಂಡು ಬಿಡಿ
ಗನ್ನುಗಳು ಗರಬಡಿಯುವಷ್ಟು
ಹೊತ್ತು ಮೈಮರೆತು ಬಿಡಿ
ಬಾಂಬುಗಳು ಬರಗೆಟ್ಟು
ನಿಷ್ಕ್ರೀಯವಾಗಬೇಕು
ಅಷ್ಟು ಪ್ರೀತಿಯಲ್ಲಿ
ಭಾವಿಸಿಬಿಡಿ
ಅಪ್ಪುಗೆಯಲ್ಲಿ ಜಗ ಕೊನೆಗೊಳ್ಳಬೇಕು
ಅಷ್ಟು ಸಮಯ ಮುಳುಗಿ ಬಿಡಿ
ತಬ್ಬಿಕೊಳ್ಳಿ
ಮಾನವನ ಎದೆಯಿಂದಲೆದೆಗೆ
“ಅಮೃತವಾಹಿನಿಯೊಂದು ಹರಿಯುವವರೆಗೂ ಸತತ”
ಪ್ಯಾಲೆಸ್ತೀನ್,ಇರಾನ್, ಇಸ್ರೇಲ್ ,
ಯುದ್ಧ ಸುದ್ದಿ ಬಿತ್ತರಿಸುವ
ಕೈಯಲ್ಲಿನ ಮೊಬೈಲ್
ಎಲ್ಲರೂ ಕ್ಷಣ , ಸ್ವಲ್ಪ, ತುಸು
ಅವಧಿಗಾದರೂ ಮುಳುಗಬೇಕು ಗಾಬರಿಯಲ್ಲಿ
ಪರಸ್ಪರ ಅಪ್ಪಿಕೊಂಡುಬಿಟ್ಟಲ್ಲಿ
ಆತ್ಮಗಳು ಪರಸ್ಪರ ಸಂಧಿಸುವಲ್ಲಿ
ಅಲ್ಲಿಗೇ ಜಗತ್ತು ಸ್ತಂಭಿಸಿಬಿಡಲಿ
ಅಪ್ಪುಗೆಯ ಲೋಕ ಲಂಭಿಸಿಬಿಡಲಿ
ಬನ್ನಿ ನಾನೂ ಅಪ್ಪುತ್ತೇನೆ
ಇಂತಿ ನಿಮ್ಮ ನಿರೀಕ್ಷೆಯಲ್ಲಿ

-ಮಮತಾ ಅರಸೀಕೆರೆ
—–
