ಅನುದಿನ ಕವನ-೧೭೫೪, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ., ಕವನದ ಶೀರ್ಷಿಕೆ: ದೀಪಾವಳಿಯ ಮಹಾಬೆಳಗು

ದೀಪಾವಳಿಯ ಮಹಾಬೆಳಗು.

ಮೌಢ್ಯಗಳ ಮುರಿಯದ
ಮನುಜ
ಭಾಹ್ಯಾಕಾಶಕೆ ಹಾರಿದೊಡೆ
ಸಿಕ್ಕೀತು ಚಂದಿರನಂಗಳ
ಆದರೆ
ಸಿಕ್ಕೀತೆ ಬೆಳದಿಂಗಳು?

ಹೃದಯ ಅರಿಯದ
ಮನುಜ
ಶರಧಿ ಜಾಲಾಡಿದೊಡೆ
ಸಿಕ್ಕೀತು ಸ್ವಾತಿಮುತ್ತು
ಆದರೆ
ಪ್ರೀತಿಗೆಲ್ಲಿದೆ ಕಿಮ್ಮತ್ತು?

ಕ್ರೌರ್ಯದ ಕಂದರಕಿಳಿದ
ಮನುಜ
ಹಿಮಾಲಯ ಏರಿದೊಡೆ
ಸಿಕ್ಕೀತು ತುತ್ತತುದಿ
ಆದರೆದ
ಸಿಕ್ಕೀತೆ ಜಯದ ಹಾದಿ?

ಕಣ್ಣೊಳಗಿನ ಕತ್ತಲು ಕೊಲ್ಲದ
ಮನುಜ
ಲಕ್ಷ ದೀಪಗಳ ಹಚ್ಚಿದೊಡೆ
ಬೆಳಕಾದೀತು ಬಾಹ್ಯ
ಆದರೆ
ಬೆಳಗೀತೆ ಅಂತರಂಗ

ಮತಾಪುಗಳ ಸುಡುವ
ಮನುಜ
ಶೋಷಣೆಯ ಸುಟ್ಟೊಡೆ
ಸಿಕ್ಜೀತು ಸಮತೆ ಬೆಳಗು!
ಅದುವೇ
ದೀಪಾವಳಿ ಮಹಾಬೆಳಗು!!


-ಎ.ಎಂ.ಪಿ ವೀರೇಶಸ್ವಾಮಿ
ಹೊಳಗುಂದಿ.