ಅನುದಿನ ಕವನ-೧೭೬೮, ಕವಿ: ಎ.ಎನ್ ರಮೇಶ್, ಗುಬ್ಬಿ, ಕವನದ ಶೀರ್ಷಿಕೆ: ಕನ್ನಡವೆಂದರೆ….

ಕನ್ನಡವೆಂದರೆ….

ಹುಟ್ಟುತ್ತಲೇ ನಾಲಿಗೆ ಮೇಲೆ
ಅಮ್ಮ ಮೂಡಿಸಿದ ನುಡಿ
ಎದೆಯ ಮಂದಿರದ ಒಳಗೆ
ಅಪ್ಪ ಹೊತ್ತಿಸಿದ ಕಿಡಿ..!

ಸ್ಲೇಟು ಹಾಳೆಗಳ ಮೇಲೆಲ್ಲ
ಗುರುಗಳು ತಿದ್ದಿಸಿದ ಅಕ್ಷರ
ತನುಮನದ ನರನರದಲ್ಲೆಲ್ಲ
ಗೆಳೆಯರು ಹರಡಿದ ಸ್ವರ.!

ಒಡಲಲಿ ಮೊರೆವ ಭಾವವ
ಜಗದೆದುರು ಬಿಚ್ಚಿಡುವ ಲಿಪಿ
ಬುವಿಯಲಿ ನನ್ನಯ ಜೀವವ
ಝೇಂಕರಿಸುವ ಭಾಷ್ಯ ರೂಪಿ.!

ಅನುಕ್ಷಣ ಬದುಕನು ಪೊರೆವ
ಅನನ್ಯ ಕಸ್ತೂರಿಸೌರಭ ಕಂಪು
ಅಡಿಗಡಿಗು ಬಾಳ ಪುಳಕಿಸುವ
ಅಮರ ಮಾಧುರ್ಯ ಇಂಪು.!

ನನ್ನಯ ಜನ್ಮ ಜನುಮಗಳ
ತಪನೆ ಆರಾಧನೆಗಳ ಫಲಶೃತಿ
ಜೀವಭಾವಗಳ ಭಾಗ್ಯ ಸೌಭಾಗ್ಯ
ಋಣಾನುಬಂಧ ಪುಣ್ಯ ಸುಕೃತಿ.!

ಕನ್ನಡವಿದು ಭಾಷೆ ಮಾತ್ರವಲ್ಲ
ಈ ಜೀವಜೀವನದ ಪಂಚಪಾತ್ರೆ
ಅಕ್ಷರ ಸ್ವರ ಪದಗಳ ಸೂತ್ರವಲ್ಲ
ದಿವ್ಯಾನುಭೂತಿಯ ಆತ್ಮಯಾತ್ರೆ.!

ಕನ್ನಡವಿದು ಅಮರ ಸಂಸ್ಕೃತಿ
ಜೀವ ಕಣಕಣದ ಚಿರಂತನ ಪ್ರೀತಿ
ಉಸಿರುಸಿರಿನಾ ಲಯತಾಳ ಶೃತಿ
ಸಮೃದ್ದಿ ಸಮಷ್ಠಿಗಳ ಸಂಪ್ರೀತಿ.!


-ಎ.ಎನ್.ರಮೇಶ್.ಗುಬ್ಬಿ