ಅನುದಿನ ಕವನ-೧೭೮೦, ಕವಿ: ಎನ್.‌ಕೆ.‌ಹನುಮಂತಯ್ಯ ಕವನದ ಶೀರ್ಷಿಕೆ:ಸಾಲುಮರದ ತಿಮ್ಮಕ್ಕ

ಸಾಲುಮರದ ತಿಮ್ಮಕ್ಕ

ನಾಡಿಗೆ ಕನ್ನಡಿಯಾದ ಬಡವಿ
ಸಾಲುಮರದ ತಿಮ್ಮಕ್ಕ
ಗಿಡ ಮರ ಸಾಕಿ ಸಲುಹಿದ ತಾಯಿ
ಸಾಲು ಮರದ ತಿಮ್ಮಕ್ಕ

ನೋವಿನ ಸುಡುಗಾಡಲ್ಲಿ
ಹಸಿರು ಹಡೆದ ತಿಮ್ಮಕ್ಕ
ಹೊಲಸೆಂದು ನೂಕಿದ ಮಡಿಲಿನ ಒಳಗೆ
ಪಕ್ಷಿ ತೂಗಿದ ತಿಮ್ಮಕ್ಕ

ಬಿಸಿಲಿನ ಕಡಲಲಿ ನೆರಳ ಹಡಗು
ನಿನ್ನ ಬೆವರೆ ತಿಮ್ಮಕ್ಕ
ಬಂಜೆಯ ಮಡಿಲಲಿ ಮಗುವಿನ ಬೆಡಗು
ನಿನ್ನ ಛಲವೇ ತಿಮ್ಮಕ್ಕ
ಸಾಲು ಮರದ ತಿಮ್ಮಕ್ಕ

ಬೆಂಕಿಯ ಒಳಗೆ ನೀರ ಬೇರನು ಇಳಿಸಿ
ಆಗಸದಗಲ ಎಲೆಯನ್ನು ಅರಳಿಸಿ
ಕರ್ರನೆ ನೆರಳಾದವಳೇ
ಮುಟ್ಟದ ಮತ್ಸರಕೆ ನಿನ್ನ
ಮುಗುಳುನಗು ಸಾಕು

-ಎನ್. ಕೆ. ಹನುಮಂತಯ್ಯ
(‘ಚಿತ್ರದ ಬೆನ್ನು’ ಕವನ ಸಂಕಲನ, 2006)
—-