“ಕವಿತೆಯ ಮಾಧುರ್ಯ ಬಣ್ಣಿಸುವ ಸ್ವರ ರಿಂಗಣಗಳ ಸವಿ ಸುಂದರ ಕವಿತೆ. ಕಾವ್ಯ ಸೌಂದರ್ಯದ ಭಾವಭಾಷ್ಯಗಳ ಅನಾವರಣಗೊಳಿಸುವ ಮಧು ಮಧುರ ಅಕ್ಷರಪ್ರಣತೆ. ಹೆಚ್ಚೇನೂ ಹೇಳಲಾರೆ. ಓದಿದಷ್ಟೂ ಆಪ್ತವಾಗುತ್ತದೆ. ಆಳಕ್ಕಿಳಿದಷ್ಟೂ ಆತ್ಮೀಯವಾಗುತ್ತದೆ. ಆಸ್ವಾಧಿಸಿದಷ್ಟೂ ಆನಂದವಾಗುತ್ತದೆ. ಆರಾಧಿಸುವವರ ಆಂತರ್ಯ ಬೆಳಗುವ ಮಧುರಾನುಭೂತಿಯೇ ಕಾವ್ಯದ ಔದಾರ್ಯ. ಇದುವೆ ಯುಗ ಯುಗದ ಜಗದ ಭಾವವಿಸ್ಮಯ. ಏನಂತೀರಾ..?”
-ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಗೆಳತಿ ಕವಿತೆಯೆಂದರೆ…
ಮುಂಜಾನೆ ಬಾನಿನ ಕೆಂಪು
ಬಿರಿದ ಮಲ್ಲಿಗೆಯ ಕಂಪು
ಸುರಿವ ಚಂದ್ರಕಾಂತಿ ತಂಪು
ಕೋಗಿಲೆ ಸುಸ್ವರದ ಇಂಪು.!
ಗೆಳತಿ ಕವಿತೆಯೆಂದರೆ…
ಮಿನುಗುವ ಇಬ್ಬನಿ ಮುತ್ತು
ಸುಮದ ಮಕರಂದ ತುತ್ತು
ಸಾಗರದಾಳದ ಸಿರಿ ಸೊತ್ತು
ಆ ಕಾಮನಬಿಲ್ಲಿನ ಹೊತ್ತು.!
ಗೆಳತಿ ಕವಿತೆಯೆಂದರೆ…
ಕಡಲ ಅಲೆಗಳ ಭವ್ಯ ನರ್ತನ
ಹೊನಲ ಮಂಜುಳ ಕೀರ್ತನ
ದೇಗುಲದ ದಿವ್ಯ ಮಂತ್ರಗಾನ
ಮುಗಿಲ ಮೇಲಿನ ರಮ್ಯಯಾನ
ಗೆಳತಿ ಕವಿತೆಯೆಂದರೆ…
ಮುಸ್ಸಂಜೆ ಮೋಡದ ಚಿತ್ತಾರ
ಮಯೂರ ನಾಟ್ಯದ ಸಹಸ್ರಾರ
ಮಾರುತಕೆ ತೂಗುವ ಮಂದಾರ
ರತಿ-ಮನ್ಮಥರ ಪ್ರೇಮಶೃಂಗಾರ.!
ಗೆಳತಿ ಕವಿತೆಯೆಂದರೆ…
ಅಮ್ಮನ ಮಡಿಲಿನ ಜೋಗುಳ
ಒಲಿದ ಒಡಲಿನ ಯುಗಳ
ಕಂದನ ಕಂಗಳಿನ ತಿಂಗಳ
ಹೃದ್ಯ ವೀಣೆಯ ರಾಗತಾಳ.!
ಗೆಳತಿ ಕವಿತೆಯೆಂದರೆ…
ಕೋಟಿಭಾವಗಳ ರಾಗಲಹರಿ
ಸಹಸ್ರಚೈತನ್ಯಗಳ ಜೀವಪ್ರಹರಿ
ಅನಂತ ಒಲವಿನ ಮಾಯಾಭೇರಿ
ಶ್ಯಾಮನುಸುರಿನ ದೇವಬಾಸುರಿ.!
ಗೆಳತಿ ನನಗೆ ಕವಿತೆಯೆಂದರೆ..
ಜಗದ ಸಮಸ್ತ ಚೆಲುವಿನ ಸಾರ
ಕವಿಯ ಗೆಲುವಿನ ಅನನ್ಯ ಹಾರ
ಎದೆಗಳ ಬೆಸೆವ ಅಪೂರ್ವ ದಾರ
ಮನದಂಗಳ ಬೆಳಗುವ ನಕ್ಷತ್ರತಾರ.!

-ಎ.ಎನ್.ರಮೇಶ್. ಗುಬ್ಬಿ.
