ಮಸ್ಕಿ, ಸೆ. 6: ಸಾಮ್ರಾಟ್ ಅಶೋಕನ ಐತಿಹಾಸಿಕ ನೆಲ ಮಸ್ಕಿಯ ಇತಿಹಾಸ, ಜಾನಪದ ಪರಂಪರೆ ಹಾಗೂ ಹಗಲುವೇಷ ಕಲೆಯ ಸಾಂಸ್ಕೃತಿಕ ವೈಶಿಷ್ಟ್ಯವನ್ನು ಪರಿಚಯಿಸುವ ಉದ್ದೇಶದಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಹಾಗೂ ಶ್ರೀ ಬಹುರೂಪಿ ಚೌಡಯ್ಯ ಹಗಲು ವೇಷ ಕಲಾವಿದರ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಮಸ್ಕಿಯಲ್ಲಿ ಆಯೋಜಿಸಿದ್ದ ಒಂದು ದಿನದ ವಿಚಾರ ಸಂಕಿರಣ ಯಶಸ್ವಿಯಾಯಿತು.
ಕರ್ನಾಟಕದ ಅಲೆಮಾರಿ ಕಲಾವಿದರ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಹಗಲುವೇಷ ಕಲಾವಿದರ ಕಲೆ, ಬದುಕು ಮತ್ತು ಸಾಂಸ್ಕೃತಿಕ ಅನನ್ಯತೆ ಕುರಿತ ವಿಶೇಷ ಉಪನ್ಯಾಸವನ್ನು ಅಲೆಮಾರಿ ಬುಡ್ಗ ಜಂಗಮ ಸಮುದಾಯದ ಸಂಶೋಧಕರಾದ ಬಳ್ಳಾರಿಯ ಡಾ. ಅಶ್ವ ರಾಮು ಅವರು ನೀಡಿದರು.

ಹಗಲುವೇಷವು ಕೇವಲ ಮನರಂಜನೆಯ ಕಲೆಯಲ್ಲ. ಅದು ಗ್ರಾಮೀಣ ಜನಜೀವನ, ಸ್ಥಳೀಯ ಭಾಷೆ, ನಂಬಿಕೆ, ಸಂಪ್ರದಾಯ, ಸಾಮಾಜಿಕ ಸಂಬಂಧಗಳು ಹಾಗೂ ಜನರ ನೋವು-ನಲಿವುಗಳನ್ನು ಪ್ರತಿಬಿಂಬಿಸುವ ಜೀವಂತ ಜನಪದ ರಂಗಭೂಮಿ ಎಂದು ಡಾ. ಅಶ್ವ ರಾಮು ವಿವರಿಸಿದರು.
ಮಸ್ಕಿಯ ಕಲ್ಲಿನ ಶಾಸನದಲ್ಲಿ ಅಶೋಕನ ಇತಿಹಾಸ ದಾಖಲಾಗಿರುವಂತೆ, ಇಲ್ಲಿನ ಹಗಲುವೇಷ ಕಲಾವಿದರ ವೇಷ, ಹಾಡು, ಸಂಭಾಷಣೆ ಮತ್ತು ಪ್ರದರ್ಶನಗಳಲ್ಲಿ ಜನಸಾಮಾನ್ಯರ ಸಾಮಾಜಿಕ ಹಾಗೂ ಸಾಂಸ್ಕೃತಿಕ ಇತಿಹಾಸ ಜೀವಂತವಾಗಿದೆ. ಹಿರಿಯ ಕಲಾವಿದರಿಂದ ಕಿರಿಯ ಪೀಳಿಗೆಗೆ ಮೌಖಿಕವಾಗಿ ವರ್ಗಾವಣೆಯಾಗುತ್ತಿರುವ ಈ ಅಮೂಲ್ಯ ಪರಂಪರೆಯನ್ನು ದಾಖಲಿಸಿ ಸಂರಕ್ಷಿಸುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು. ಬಂಜಾರ ಅಕಾಡೆಮಿ ಹೇಗೆ ಪ್ರತ್ಯೇಕವಾಗಿ ಇದೇಯೋ ಹಾಗೆಯೇ ಹಗಲು ವೇಷಗಾರ, ಅಲೆಮಾರಿ ಬುಡ್ಗ ಜಂಗಮ ಕಲಾ ಅಕಾಡೆಮಿ ಸ್ಥಾಪಿಸಿ ಬೇಕೆಂದು ಒತ್ತಾಯಿಸಿದರು.
ಗದಗಿನ ಮಹಾತ್ಮ ಗಾಂಧಿ ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಅಮರೇಶ ಯಾತಗಲ್ ಅವರು, ಜನಪದ ಕಲೆ ಹಾಗೂ ಕಲಾವಿದರ ಸಂರಕ್ಷಣೆಯ ಮಹತ್ವಕ್ಕೆ ಒತ್ತು ನೀಡಬೇಕೆಂದು ಹೇಳಿದರು.

ಶ್ರೀ ಬಹುರೂಪಿ ಚೌಡಯ್ಯ ಹಗಲುವೇಷ ಕಲಾವಿದರ ಟ್ರಸ್ಟ್‌ನ ಅಧ್ಯಕ್ಷರು ಸೇರಿದಂತೆ ಹಲವು ಗಣ್ಯರು, ಕಲಾವಿದರು, ಸಂಶೋಧಕರು ಹಾಗೂ ಜಾನಪದಾಸಕ್ತರು ಉಪಸ್ಥಿತರಿದ್ದರು.
ಸನ್ಮಾನ: ಇದೇ ಸಂದರ್ಭದಲ್ಲಿ ಡಾ ಅಶ್ವ ರಾಮು ಅವರನ್ನು ಸನ್ಮಾನ ಪತ್ರ ನೀಡಿ ಗೌರವ ಸಲ್ಲಿಸಲಾಯಿತು.
“ಮಸ್ಕಿಯ ಕಲ್ಲಿನಲ್ಲಿ ಅಶೋಕನ ಇತಿಹಾಸವಿದ್ದರೆ, ಹಗಲುವೇಷ ಕಲಾವಿದರ ಕಲೆಯಲ್ಲಿ ಜನರ ಜೀವಂತ ಇತಿಹಾಸವಿದೆ” ಎಂಬ ಸಂದೇಶವು ವಿಚಾರ ಸಂಕಿರಣದ ಪ್ರಮುಖ ಆಶಯವಾಗಿ ಮೂಡಿಬಂತು.”
