ಶೈಕ್ಷಣಿಕ ಸಂಯೋಜಕ ಹುದ್ದೆಗಳನ್ನು ಅ.1 ರೊಳಗೆ ನೇಮಕ‌ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿ ನಾನ್ ಯುಜಿಸಿ ಅತಿಥಿ ಉಪನ್ಯಾಸಕರಿಂದ ಬೆಂಗಳೂರು ಚಲೋ!

ಬೆಂಗಳೂರು, ಸೆ. 28: ಕಾಲೇಜು ಶಿಕ್ಷಣ ಇಲಾಖೆಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಲವು ವರ್ಷಗಳಿಂದ  ಕಾರ್ಯನಿರ್ವಹಿಸಿದ  ನಾನ್ ಯುಜಿಸಿ ಅತಿಥಿ ಉಪನ್ಯಾಸಕರಿಗಾಗಿ ಸೃಜಿಸಿರುವ ಶೈಕ್ಷಣಿಕ ಸಂಯೋಜಕ ಹುದ್ದೆಗಳನ್ನು ನೇಮಕ‌ಮಾಡಿಕೊಳ್ಳ ಬೇಕು ಎಂದು ಒತ್ತಾಯಿಸಲು ಇಂದು (ಸೋಮವಾರ) ರಾಜ್ಯದ ಮೂವತ್ತು ಜಿಲ್ಲೆಗಳಿಂದ ಸಾವಿರಕ್ಕೂ ಹೆಚ್ಚು ಬೆಂಗಳೂರಿಗೆ ಆಗಮಿಸಿದ್ದಾರೆ.

ಶೈಕ್ಷಣಿಕ ವರ್ಷ ಆರಂಭವಾಗಿ ಮೂರು ತಿಂಗಳು ಕಳೆದರೂ ನಾನ್ ಯುಜಿಸಿ ಅತಿಥಿ ಉಪನ್ಯಾಸಕರಿಗೆ ಭರವಸೆ ನೀಡಿದಂತೆ ಆದೇಶ ಹೊರಡಿಸಿದ್ದ ಶೈಕ್ಷಣಿಕ ಸಂಯೋಜಕ ಹುದ್ದೆಗಳ ನೇಮಕಾತಿ ಮಾಡದೇ ವಿಳಂಬ ತೋರುತ್ತಿರುವ ಇಲಾಖೆ, ಸರಕಾರದ ಕ್ರಮವನ್ನು ನಾನ್ ಯುಜಿಸಿ ಅತಿಥಿ ಉಪನ್ಯಾಸಕರು ಟೀಕಿಸಿದ್ದಾರೆ.

ಬಳ್ಳಾರಿ-ವಿಜಯನಗರ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ರೈಲು, ಬಸ್ಸುಗಳ ಮೂಲಕ ರಾಜಧಾನಿ ತಲುಪಿರುವ ನಾನ್ ಯುಜಿಸಿ ಅತಿಥಿ ಉಪನ್ಯಾಸಕರು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರನ್ನು ಭೇಟಿ ಮಾಡಿ ಅಕ್ಟೋಬರ್ 1 ರೊಳಗೆ ತಮಗೆ ನೇಮಕಾತಿ ಪತ್ರಗಳನ್ನು ನೀಡಬೇಕೆಂದು ಒತ್ತಾಯಿಸಲಿದ್ದಾರೆ.

ಸರಕಾರದಿಂದ ಅದೇಶವಾಗಿ ಆರೇಳು ತಿಂಗಳು ಕಳೆದರೂ ವೃಥಾ ವಿಳಂಬ ಮಾಡುತ್ತಿರುವ ಬಗ್ಗೆ ಸರಕಾರ ಮತ್ತು ಇಲಾಖೆಯನ್ನು ಪ್ರಶ್ನಿಸಲಿದ್ದಾರೆ.

ಪ್ರಜಾವಾಣಿ 27-09-2026, ಮುಖಪುಟ

ನಾಡಿನ ಹೆಸರಾಂತ ಪತ್ರಿಕೆ ಪ್ರಜಾವಾಣಿ ಭಾನುವಾರ ಮುಖಪುಟದಲ್ಲಿ ನಾನ್ ಯುಜಿಸಿ ಅತಿಥಿ ಉಪನ್ಯಾಸಕರಿಗೆ ಶೈಕ್ಷಣಿಕ ಸಂಯೋಜಕ ಹುದ್ದೆಗಳನ್ನು ನೀಡದಿರುವ ಬಗ್ಗೆ ” ‘ಅತಿಥಿ’ ಗಳಿಗೆ ಸಿಗದ ಹುದ್ದೆ” ತಲೆಬರಹದಲ್ಲಿ ಸರಕಾರದ ಗಮನ ಸೆಳೆದಿದೆ.

ಈ ಮಧ್ಯೆ ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ ಅವರು ಸರಕಾರದ ವಿಳಂಬ ನೀತಿಯನ್ನು ಆಕ್ಷೇಪಿಸಿ ‘ಆದೇಶ ಹೊರಡಿಸಿ, ನೇಮಕಾತಿ ಮಾತ್ರ ಮಾಡದಿರುವುದೇಕೆ?’ ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ತಮ್ಮ‌’ಎಕ್ಸ್’ ಖಾತೆಯಲ್ಲಿ ಅಶೋಕ್ ಅವರು ಸರ್ಕಾರ ಆದೇಶ ಹೊರಡಿಸಿ ಹಲವು ತಿಂಗಳುಗಳು ಕಳೆದರೂ ನೇಮಕಾತಿ ಪ್ರಕ್ರಿಯೆ ವಿಳಂಬ ಮಾಡುತ್ತಿರುವುದು ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಗೆ ಹಿಡಿದ ಕೈಗನ್ನಡಿ. ಸಾವಿರಾರು ಅತಿಥಿ ಉಪನ್ಯಾಸಕರು ಮತ್ತು ಅವರ ಕುಟುಂಬಗಳು ಸರ್ಕಾರದ ನಿರ್ಧಾರಕ್ಕಾಗಿ ಕಾಯುತ್ತಿವೆ. ಅವರ ಜೀವನ ಮತ್ತು ಭವಿಷ್ಯದೊಂದಿಗೆ ಸರ್ಕಾರ ಆಟವಾಡಬಾರದು. ರಾಜ್ಯ ಸರ್ಕಾರ ಈ ವಿಚಾರದಲ್ಲಿ ಇನ್ನು ವಿಳಂಬ ಮಾಡದೆ ಸ್ಪಷ್ಟ ಹಾಗೂ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಶೈಕ್ಷಣಿಕ ಸಂಯೋಜಕರ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣ ಪೂರ್ಣಗೊಳಿಸಿ, ಅತಿಥಿ ಉಪನ್ಯಾಸಕರಿಗೆ ನ್ಯಾಯ ಒದಗಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಒತ್ತಾಯಿಸಿರುವ ಅಶೋಕ್ ಅವರು, ಅತಿಥಿ ಉಪನ್ಯಾಸಕರ ಬದುಕಿನ ಅನಿಶ್ಚಿತತೆಯನ್ನು ಹೆಚ್ಚಿಸುವ ನಿರ್ಲಕ್ಷ್ಯ ಧೋರಣೆ ಸಲ್ಲದು. ಅವರ ಜೀವನದೊಂದಿಗೆ ಆಟವಾಡುವುದನ್ನು ರಾಜ್ಯ ಸರ್ಕಾರ ಕೂಡಲೇ ನಿಲ್ಲಿಸಬೇಕು ಎಂದು ತಿಳಿಸಿದ್ದಾರೆ.

—-

Leave a Reply

Your email address will not be published. Required fields are marked *