ಅನುದಿನ ಕವನ-೧೯೮೪, ಕವಿ: ಚಿದಂಬರ ನರೇಂದ್ರ, ಬೆಂಗಳೂರು

ಕೆಲವೊಂದು ಮೌನಗಳು
ಅನಿಸುತ್ತವೆ ಸಮಾಧಾನಗಳಂತೆ ;
ಮುಂಜಾನೆಯ ನಿಶಾಂತ ಸರೋವರ,
ಮಳೆ ಹನಿಯುವ ಮುಂಚಿನ ಸ್ತಬ್ಧತೆ,
ನಿದ್ದೆಯಲ್ಲಿರುವಂತೆ ಕಾಣುವ ಖಾಲೀ ರಸ್ತೆ.

ಮತ್ತು ಇನ್ನೂ ಕೆಲವು ಮೌನಗಳು
ಅಪೂರ್ಣತೆಗಳಂತೆ –
ಒಮ್ಮೆ ಏನು ಮಾತನಾಡಬೇಕೆಂದು
ನಿಖರವಾಗಿ ಗೊತ್ತಿದ್ದ ಇಬ್ಬರ ನಡುವೆ ನೆಲೆಸಿರುವ
ಅಸಹಜ ಮುಜುಗರ.

ಯಾವುದೂ ಮುರಿದು ಬೀಳುವುದಿಲ್ಲ,
ಸುಮ್ಮನೇ ಬೇರೆ ಮಾಡುತ್ತದೆ ಜಗತ್ತು.

ಮತ್ತು ವರ್ಷಗಳ ನಂತರವೂ……..
ಕಾಣಿಸಿಕೊಳ್ಳುತ್ತಲೇ ಇರುತ್ತವೆ ಹೆಸರುಗಳು,
ಸಾಧಾರಣ ದಿನಗಳ ನಡುವೆ –
ಈಗ ಅಸ್ತಿತ್ವದಲ್ಲಿ ಇರದ ವಿಳಾಸದ ನಡುವೆ
ಕಾಣಿಸಿಕೊಳ್ಳುವ ಪದಗಳಂತೆ.

🌿-ಚಿದಂಬರ ನರೇಂದ್ರ, ಬೆಂಗಳೂರು

Leave a Reply

Your email address will not be published. Required fields are marked *