
ಬೆಂಗಳೂರು, ಸೆ. 28: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿರುವ Non-UGC ಅತಿಥಿ ಉಪನ್ಯಾಸಕರಿಗೆ ಸರ್ಕಾರ ಅನುಮೋದಿಸಿರುವ “ಶೈಕ್ಷಣಿಕ ಸಂಯೋಜಕ” ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಒಂದು ವಾರದೊಳಗೆ ಆರಂಭಿಸಲಾಗುವುದು ಎಂದು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಗೋಪಾಲಕೃಷ್ಣ ಅವರು ಭರವಸೆ ನೀಡಿದ್ದಾರೆ.
ಸೋಮವಾರ ಬೆಂಗಳೂರಿನ ಕಾಲೇಜು ಶಿಕ್ಷಣ ಇಲಾಖೆಯ (DCE) ಕಚೇರಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ 300ಕ್ಕೂ ಹೆಚ್ಚು Non-UGC ಅತಿಥಿ ಉಪನ್ಯಾಸಕರು ಆಗಮಿಸಿ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಕಳೆದ ಸುಮಾರು 10 ತಿಂಗಳಿಂದ ಉದ್ಯೋಗ ಮತ್ತು ಆದಾಯವಿಲ್ಲದೆ ಸಂಕಷ್ಟದಲ್ಲಿರುವ ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟು, ಸರ್ಕಾರದಿಂದ ಸೃಷ್ಟಿಸಿ ಅನುಮೋದಿಸಿರುವ ಶೈಕ್ಷಣಿಕ ಸಂಯೋಜಕರ ಹುದ್ದೆಗಳಿಗೆ ಶೀಘ್ರ ಕೌನ್ಸೆಲಿಂಗ್ ನಡೆಸಿ ನೇಮಕಾತಿ ಆದೇಶ ನೀಡುವಂತೆ ಮನವಿ ಮಾಡಲಾಯಿತು.
ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 5, 10, 15, 20 ಹಾಗೂ 25 ವರ್ಷಗಳಿಗೂ ಹೆಚ್ಚಿನ ಅವಧಿಗೆ Non-UGC ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವವರು, ದೀರ್ಘಕಾಲದ ಬೋಧನಾ ಅನುಭವವನ್ನು ಪರಿಗಣಿಸಿ ಶೈಕ್ಷಣಿಕ ಸಂಯೋಜಕರ ಹುದ್ದೆಗಳಿಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.

ಈ ಹಿಂದೆ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದ್ದು, Non-UGC ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಶೈಕ್ಷಣಿಕ ಸಂಯೋಜಕರ ಹುದ್ದೆಗಳ ನೇಮಕಾತಿ ಕೈಗೊಳ್ಳಲಾಗುವುದು ಎಂದು ಇಲಾಖೆ ಭರವಸೆ ನೀಡಿತ್ತು. ಇದೀಗ ಅತಿಥಿ ಉಪನ್ಯಾಸಕರ ನೇಮಕಾತಿಯ ಹಲವು ಸುತ್ತುಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಶೈಕ್ಷಣಿಕ ಸಂಯೋಜಕರ ನೇಮಕಾತಿಗೆ ತಕ್ಷಣ ಚಾಲನೆ ನೀಡಬೇಕು ಎಂದು ಒತ್ತಾಯಿಸಲಾಯಿತು.
10 ತಿಂಗಳಿನಿಂದ ಉದ್ಯೋಗವಿಲ್ಲದೆ ಇರುವುದರಿಂದ ಬ್ಯಾಂಕ್ ಸಾಲ, EMI, ಮಕ್ಕಳ ಶಿಕ್ಷಣ, ಮನೆ ಬಾಡಿಗೆ, ಕುಟುಂಬ ನಿರ್ವಹಣೆ ಸೇರಿದಂತೆ ದಿನನಿತ್ಯದ ಖರ್ಚುಗಳನ್ನು ನಿಭಾಯಿಸುವುದು ಕಷ್ಟವಾಗಿದೆ. ಹಲವು ವರ್ಷಗಳ ಸೇವೆ ಸಲ್ಲಿಸಿದರೂ ಮುಂದಿನ ಉದ್ಯೋಗದ ಬಗ್ಗೆ ಅನಿಶ್ಚಿತತೆ ಉಂಟಾಗಿದೆ ಎಂದು ಉಪನ್ಯಾಸಕರು ತಮ್ಮ ಅಳಲನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ 300ಕ್ಕೂ ಹೆಚ್ಚು Non-UGC ಅತಿಥಿ ಉಪನ್ಯಾಸಕರ ಉಪಸ್ಥಿತಿಯಲ್ಲಿ ಮನವಿ ಸಲ್ಲಿಸಲಾಯಿತು. ಮನವಿಯನ್ನು ಸ್ವೀಕರಿಸಿದ ಆಯುಕ್ತರು, ಶೈಕ್ಷಣಿಕ ಸಂಯೋಜಕರ ಹುದ್ದೆಗಳ ನೇಮಕಾತಿ ಕುರಿತು ಒಂದು ವಾರದೊಳಗೆ ಪ್ರಕ್ರಿಯೆ ಆರಂಭಿಸುವ ಬಗ್ಗೆ ಸ್ಪಷ್ಟಪಡಿಸಿರುವುದು ದೀರ್ಘಕಾಲದಿಂದ ಕಾಯುತ್ತಿರುವ ಉಪನ್ಯಾಸಕರಲ್ಲಿ ಹೊಸ ಭರವಸೆ ಮೂಡಿಸಿದೆ.

“10 ತಿಂಗಳ ನಿರುದ್ಯೋಗದ ನಂತರ ಶೈಕ್ಷಣಿಕ ಸಂಯೋಜಕರ ಹುದ್ದೆಯೇ ನಮ್ಮ ಪ್ರಮುಖ ಆಶಾಕಿರಣವಾಗಿದ್ದು, ಆಯುಕ್ತರು ನೀಡಿರುವ ಭರವಸೆಯಂತೆ ಶೀಘ್ರ ಕೌನ್ಸೆಲಿಂಗ್ ಆರಂಭವಾಗಿ ಅರ್ಹರಿಗೆ ನೇಮಕಾತಿ ಆದೇಶ ದೊರೆಯಬೇಕು” ಎಂದು Non-UGC ಅತಿಥಿ ಉಪನ್ಯಾಸಕರು ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಿಕ್ಷಣ ತಜ್ಞರೂ ಆದ AICUTA NR ಮುಖಂಡ ರಾಜಶೇಖರ್,
ನಾನ್ ಯುಜಿಸಿ ಅತಿಥಿ ಉಪನ್ಯಾಸಕರ ಸಂಘದ ಮುಖಂಡರಾದ ಸುನೀತಾ ಎಸ್, ರವಿ ಸ್ಥಾನಿಕ, ಗಂಗಾಲಕ್ಷ್ಮಿ, ಹರೀಶ್ ಡಿ.ಎಲ್, ಭರತೇಶ ಎಂ, ರಾಮಣ್ಣ, ಚಂದ್ರು, ಪಾಲಯ್ಯ ,
ಅಜಿತ್, ವರಲಕ್ಷ್ಮಿ , ಭೀಮಣ್ಣ, ಬಲರಾಮ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
