
ಬಳ್ಳಾರಿ, ಸೆ.28: ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪುರುಷೋತ್ತಮ ಹಂದ್ಯಾಳ್ ಅವರಿಗೆ ಅಭಿನಯವು ರಂಗ ಕಲಾವಿದರಾಗಿದ್ದ ಇವರ ತಂದೆ ಜಿ. ಹನುಮಂತಪ್ಪ ಅವರಿಂದ ರಕ್ತಗತವಾಗಿರುವ ಬಂದಿರುವ ಕಲೆ ಎಂದು ವಿಶ್ರಾಂತ ಡಿಡಿಪಿಐ, ಸಾಹಿತಿ ಹೆಚ್.ಎಂ. ಮಲ್ಲಿಕಾರ್ಜುನ ಸ್ವಾಮಿ ಅವರು ಹೇಳಿದರು.
ನಗರದ ಗಡಿಗೆ ಚನ್ನಪ್ಪ ವೃತ್ತದ ಬಳಿ ಇರುವ ವೃಷಾಂಕ್ ಆಪ್ಟಿಕಲ್ಸ್ ಗೆಳೆಯರ ಬಳಗ ಭಾನುವಾರ ಸಂಜೆ
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪುರುಷೋತ್ತಮ ಹಂದ್ಯಾಳ್ ಅವರಿಗೆ ಸನ್ಮಾನಿಸಲು
ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ತಮ್ಮ ರಂಗ ಸಾಧನೆಯ ಮೂಲಕ ನಮ್ಮೂರು ಹಂದ್ಯಾಳ್ ಹೆಸರನ್ನು ರಾಜ್ಯಮಟ್ಟದಲ್ಲಿ ಮತ್ತೊಮ್ಮೆ ಬೆಳಕಿಗೆ ತಂದ ಪುರುಷೋತ್ತಮ ಅವರು ಗ್ರಾಮದ ಹೆಮ್ಮೆ ಎಂದು ಕೊಂಡಾಡಿದರು.

ಪುರುಷೋತ್ತಮ ಅವರ ತಂದೆ ರಂಗಕಲಾವಿದ ಜಿ. ಹನುಮಂತಪ್ಪ ಅವರು ವೀರ ಅಭಿಮನ್ಯು ನಾಟಕದಲ್ಲಿ ಅಭಿನಯಿಸಿದ ಕೃಷ್ಣ ನ ಪಾತ್ರವನ್ನು ಇಂದಿಗೂ
ಗ್ರಾಮದಲ್ಲಿ ನೆನಪಿಸಿಕೊಳ್ಳುತ್ತಾರೆ ಎಂದು ತಿಳಿಸಿದರು.
ಪುರುಷೋತ್ತಮ ಅವರ
ಸರಳಾ ವ್ಯಕ್ತಿತ್ವಕ್ಕೆ ಮಾರು ಹೋಗದವರಿಲ್ಲ. ಹಂದ್ಯಾಳ್ ಶ್ರೀಮಹದೇವತಾತ ನಾಟಕ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿರುವ ಪುರುಷೋತ್ತಮ ಅವರ ರಂಗ ಸಂಘಟನೆ ಮೂಲಕವೂ ಗಮನ ಸೆಳೆದಿದ್ದಾರೆ ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎನ್. ವೀರಭಧ್ರಗೌಡ ಅವರು ಮಾತನಾಡಿ, ಎರಡು ದಶಕಗಳ ಕಾಲ ಪತ್ರಿಕೋದ್ಯಮ ಒಡನಾಟದಲ್ಲಿ ಸರಳಜೀವಿ ಪುರುಷೋತ್ತಮ ಅವರಿಂದ ಸಾಕಷ್ಟು ಕಲಿತಿರುವೆ. ಇವರ ರಂಗ ಸಹವಾಸ ನಾನು ನಾಟಕ ಆಡಲು ಸಾಧ್ಯವಾಯಿತು. ಪತ್ರಕರ್ತರು ಬಯಲಾಟವಾಡಿ ದಾಖಲೆ ಮಾಡಿದೆವು ಎಂದು ಸ್ಮರಿಸಿದರು.
ಪತ್ರಕರ್ತ ನರಸಿಂಹ ಮೂರ್ತಿ ಕುಲಕರ್ಣಿ ಅವರು ಮಾತನಾಡಿ ಸ್ನೇಹಜೀವಿಯಾಗಿರುವ ಪುರುಷೋತ್ತಮ ಅವರ ರಂಗ ಪಯಣ ಯಶಸ್ವಿಯಾಗಿ ಮುಂದುವರೆಯಲಿ. ಈಮೂಲಕ ರಾಷ್ಟ್ರಮಟ್ಟದಲ್ಲಿ ಜಿಲ್ಲೆಯ ಹೆಸರು ರಾರಾಜಿಸಲಿ ಎಂದು ಹಾರೈಸಿದರು.

ಪುರುಷೋತ್ತಮ ಹಂದ್ಯಾಳ್ ಅವರು ಮಾತನಾಡಿ ಸ್ನೇಹಿತರ ಪ್ರೀತಿ ವಾತ್ಸಲ್ಯ ಕಂಡು ಮನದುಂಬಿ ಬಂದಿದೆ ಎಂದು ಭಾವುಕರಾದರು. ಸಭಿಕರ ಒತ್ತಾಯಕ್ಕೆ ಶಕುನಿ ಪಾತ್ರದ ಸಂಭಾಷಣೆ ಹೇಳಿ ಚಪ್ಪಾಳೆ ಗಿಟ್ಟಿಸಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಸರ್ವಮಂಗಳಾ ಮಂಜುನಾಥ, ಪಾರ್ವತಿ ವಿರೂಪಾಕ್ಷಯ್ಯ, ಪೂಜಾ ಮಂಜುನಾಥ, ವೃಷಾಂಕ ಆಫ್ಟಿಕಲ್ಸ್ ನ ಮಂಜುನಾಥ್ ಶರ್ಮ, ಛಾಯಾಗ್ರಾಹಕರಾದ ಕೆ. .ಎಂ.ವಿರುಪಾಕ್ಷಯ್ಯ, ಬಿ. ಮಂಜುನಾಥ,
ರಾಘವೇಂದ್ರ ಆಚಾರ್, ಉಮಾಮಹೇಶ್ವರ,
ವಾಗೀಶ್ ಸ್ವಾಮಿ,
ಪಂಚಾಕ್ಷರಿ ಮತ್ತಿತರರು ಉಪಸ್ಥಿತರಿದ್ದರು.
ಹನುಮೇಶ ಬಾಬು ಸ್ವಾಗತಿಸಿದರು. ಹೊಯ್ಸಳ ರಾಘವೇಂದ್ರ ವಂದಿಸಿದರು.
—–
