ಮೆಟ್ರೋ ನಿಲ್ದಾಣಗಳಿಗೆ ಸಾಹಿತಿಗಳ ಹೆಸರಷ್ಟೇ ಏಕೆ ?
ನಮ್ಮ ನಮ್ಮ ಬದುಕನ್ನು ನೆಮ್ಮದಿಯಾಗಿಡಲು ಅದೆಷ್ಟೋ ಮಂದಿ ಶ್ರಮಿಸುತ್ತಲೇ ಇರುತ್ತಾರೆ. ಎರಡು ದಿನ ಪೌರ ಕಾರ್ಮಿಕರು ತಟಸ್ಥವಾಗಿದ್ದರೆ ಮನೆ, ಬೀದಿ, ಊರು ಗಬ್ಬೆದ್ದು ಹೋಗುತ್ತದೆ. ನಗರಗಳಲ್ಲಿ ನೀರು ಸರಬರಾಜು ಮಾಡುವವರು ಒಂದೆರಡು ದಿನ ಮುಷ್ಕರ ಹೂಡಿದರೆ ಸುಮ್ಮನಿದ್ದರೆ ಮು. ತೊಳೆಯಲು ಸಹ ನೀರು ಲಭ್ಯವಿರುವುದಿಲ್ಲ. ವೈದ್ಯರು ಮುಷ್ಕರ ಹೂಡಿದರೆ ಸಾಯುವ ಜೀವಗಳಿಗೆ ಲೆಕ್ಕವಿರುವುದಿಲ್ಲ.
ವೈದ್ಯರು ಬರೆದು ಕೊಟ್ಟ ಔಷಧಗಳನ್ನು ನರ್ಸ್ ಗಳು ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಸಕಾಲಕ್ಕೆ ಕೊಡದಿದ್ದರೆ ದೇವರೇಗತಿ ? ರಾತ್ರಿಯ ವೇಳೆ ಪೊಲೀಸರು ಬೀಟ್ ಮಾಡದೇ ನಿದ್ದೆ ಹೋದರೆ ನಮ್ಮಗಳ ನೆಮ್ಮದಿಯ ನಿದ್ದೆಗೆ ಸಂಚಕಾರ ! ಶಿಕ್ಷಕರು ತಮ್ಮ ಕರ್ತವ್ಯ ಸರಿಯಾಗಿ ಮಾಡದಿದ್ದರೆ ಜ್ಞಾನಾರ್ಜನೆಗೆ ಖೋತಾ. ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಡುಮ್ಕಿ ಹೊಡೆಯಬೇಕಾಗುತ್ತದೆ. ಗುಂಡಿಮಯ ರಸ್ತೆಗಳನ್ನು ದುರಸ್ತಿ ಮಾಡುವವರು ಗೈರುಹಾಜರಾದರೆ ವಾಹನಗಳ ಸ್ಥಿತಿಯಿರಲಿ, ನಮ್ಮ ಕೈಕಾಲು, ಸೊಂಟ ಅಧೋಗತಿ !
ವಿಜ್ಞಾನಿಗಳು ಲ್ಯಾಬಿನಲ್ಲಿ ಹಗಲಿರುಳು ಕೆಲಸ ಮಾಡದಿದ್ದರೆ ರೋಗಗಳು ಮುತ್ತಿ ಮೊರೆಯುತ್ತವೆ. ತಂತ್ರಜ್ಞಾನಗಳು ಹಳ್ಳ ಹಿಡಿಯುತ್ತವೆ. ಹೀಗೆ ಬೇರೆಬೇರೆ ಕ್ಷೇತ್ರಗಳವರ ಕೊಡುಗೆಗಳ ಬಗ್ಗೆ ಹೇಳುತ್ತಲೇ ಹೋಗಬಹುದು. ಸ್ವಯಂಸೇವಾ ಕ್ಷೇತ್ರಗಳಲ್ಲಿ ನಿಸ್ವಾರ್ಥದಿಂದ ಕೆಲಸ ಮಾಡುತ್ತಿರುವವರೂ ಇದ್ದಾರೆ.
ಹೀಗಿರುವಾಗ ರಸ್ತೆಗಳಿಗೆ, ನಿಲ್ದಾಣಗಳಿಗೆ ಹೆಸರಿಡುವ ಸಂದರ್ಭ ಬಂದರೆ ಕಲಾವಿದರು, ಸಾಹಿತಿಗಳು ಇಲ್ಲವೇ ರಾಜಕಾರಣಿಗಳ ಹೆಸರುಗಳೇ ಪ್ರಧಾನವಾಗಿ ರಾರಾಜಿಸುತ್ತವೆ. ಹಾಗಿದ್ದರೆ ಸಮಾಜದ ಅಭಿವೃದ್ಧಿಗೆ ಉಳಿದ ಕ್ಷೇತ್ರಗಳವರ ಕೊಡುಗೆ ಇಲ್ಲವೇ ?
ಅವರು ಮಾಡುವ ಕೆಲಸಕ್ಕೆ ಸಂಬಳ ಕೊಡ್ತೀವಿ ಅನ್ನೋ ಮಾತು ಬರಬಹುದು!! ಹಾಗಿದ್ದರೆ ಮನರಂಜನೆ, ಸಾಹಿತ್ಯ ಉಚಿತವಾಗಿ ಸಿಗುತ್ತದೆಯೇ ? ಅಧಿಕಾರಸ್ಥ ರಾಜಕಾರಣಿಗಳೇನು ಸಂಬಳ – ಸಾರಿಗೆ ಇಲ್ಲದೇ ಉಚಿತವಾಗಿ ಸಾರ್ವಜನಿಕರ ಸೇವೆ ಮಾಡುತ್ತಾರೆಯೇ ?
ಇಷ್ಟೆಲ್ಲ ಪ್ರಶ್ನೆ ಉದ್ಬವಿಸಿದ್ದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಬೆಂಗಳೂರಿನ ಮೆಟ್ರೋಗಳಿಗೆ ಸಾಹಿತಿಗಳ ಹೆಸರಿಡಿ ಎಂದು ಸರ್ಕಾರಕ್ಕೆ ಶಿಫಾರಸು ಮಾಡಿ, ಪಟ್ಟಿಯನ್ನೇ ನೀಡಿರುವ ಕಾರಣದಿಂದ !! ಇದರಲ್ಲಿ ಕನ್ನಡ ನಾಡುನುಡಿಗಾಗಿ ಶ್ರಮಿಸಿದ ಮಾಜಿ ಶಾಸಕ ಜಿ.ನಾರಾಯಣ ಕುಮಾರ್ (ಜಿನಾಕು)ಅವರ ಹೆಸರು ಇದೆ. ಈಗಾಗಲೇ ಬೆಂಗಳೂರು ಟೋಲ್ ಗೇಟ್ ನಿಂದ ಬಿನ್ನಿವೃತ್ತದವರೆಗಿನ ಪ್ರಮುಖ ರಸ್ತೆಗೆ ಇವರ ಹೆಸರು ಇಡಲಾಗಿದೆ. ಈ ರಸ್ತೆಯಲ್ಲಿ ಮಾಗಡಿ ರಸ್ತೆ ಮೆಟ್ರೋ, ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಮೆಟ್ರೋ ಬರುತ್ತದೆ. ಒಂದು ಮೆಟ್ರೋ ನಿಲ್ದಾಣಕ್ಕೆ ಹೆಸರಿಡುವುದಕ್ಕಿಂತಲೂ ಪ್ರಮುಖ ರಸ್ತೆಯೊಂದಕ್ಕೆ ಹೆಸರಿಟ್ಟಿರುವುದು ಮಹತ್ವದ ಸಂಗತಿ ಎಂಬುದು ಸಾಹಿತ್ಯ ಅಕಾಡೆಮಿ ಅಧ್ಯಕ್ಷರ ಗಮನಕ್ಕೆ ಬಂದಿಲ್ಲ !!
ಸಾಹಿತಿಗಳ ಹೆಸರಷ್ಟೇ ಏಕೆ ಬೇಕು ? ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರಲ್ಲೇ ಯಾರನ್ನಾದರೂ ಗುರುತಿಸಿ ಅವರ ಹೆಸರನ್ನು ಯಾವುದಾದರೂ ಬೀದಿಗೆ, ಸ್ಮಾರಕಕ್ಕೆ, ನಿಲ್ದಾಣಕ್ಕೆ ಅಥವಾ ಮೆಟ್ರೋ ಸ್ಟೇಷನಿಗೆ ಇಡಲಾಗಿದೆಯೇ ? ಎಷ್ಟು ಮಂದಿ ವಿಜ್ಞಾನಿಗಳು, ಶಿಕ್ಷಕರ ಹೆಸರನ್ನು ಬೀದಿಗಳಿಗೆ ಇಡಲಾಗಿದೆ ?
ಅಷ್ಟಕ್ಕೂ ಮೆಟ್ರೋ ಸ್ಟೇಷನ್ ಗಳಿಗೆ ಸಾಹಿತಿಗಳ ಹೆಸರನ್ನೇ ಏಕೆ ಇಡಬೇಕು, ಅಯಾ ಏರಿಯಾದ ಹೆಸರುಗಳೇ ಇರಲಿ. ಒಂದು ವೇಳೆ ಆಯಾ ಏರಿಯಾದ ಜೊತೆಗೆ ವ್ಯಕ್ತಿಗಳ ಹೆಸರು ಬೇಕು ಎನ್ನುವುದಾದರೆ ಸಮಾಜದ ನೆಮ್ಮದಿಗೆ ತೆರೆಮರೆಯಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಇತರ ಕ್ಷೇತ್ರಗಳ ಶ್ರದ್ಧಾಳುಗಳ ಹೆಸರುಗಳನ್ನು ಇಡಲಿ !!

-ಕುಮಾರ ರೈತ, ಪತ್ರಕರ್ತರು,
ಬೆಂಗಳೂರು
