ಬೆಂಗಳೂರು, ನ. 14: ಇಂದಿನ ಕಾಲದಲ್ಲಿ ಓದುವ ಸಂಸ್ಕೃತಿಯನ್ನು ಬೆಳೆಸುವುದು ಅತ್ಯಂತ ಅಗತ್ಯವಾಗಿದೆ. ಪತ್ರಿಕೆಗಳಲ್ಲಿ ಪ್ರಕಟವಾಗುವ ಅಂಕಣ ಬರಹಗಳು ಜನರಲ್ಲಿ ವೈಚಾರಿಕ ಪ್ರಜ್ಞೆಯನ್ನು ಮೂಡಿಸುತ್ತವೆ. ಅಂತಹ ಅಂಕಣ ಬರಹಗಳನ್ನು ಸಂಕಲಿಸಿ ಕೃತಿರೂಪದಲ್ಲಿ ಪ್ರಕಟಿಸುವುದು ಮಹತ್ವದ ಸಾಹಿತ್ಯಿಕ ಕಾರ್ಯವಾಗಿದೆ. ಎಂದು ಬೆಂಗಳೂರಿನ ಪ್ರಾಚ್ಯ ವಸ್ತುಗಳು ಮತ್ತು ಪ್ರಾಚೀನ ಇಲಾಖೆಯ ನಿರ್ದೇಶಕರಾದ ಡಾ.ಸ್ಮಿತಾ ರೆಡ್ಡಿ ಅವರು ಅಭಿಪ್ರಾಯಪಟ್ಟರು.
ದೇವನಹಳ್ಳಿ ನಗರದ ಕೋಡಿಮಂಚನಹಳ್ಳಿ ಬಿಟ್ಟಸಂದ್ರ ಗುರು ಸಿದ್ದಯ್ಯನವರ ಮ್ಯೂಸಿಯಂ ಮನೆಯಲ್ಲಿ ತುಮಕೂರಿನ ಅನಾಕ ಪ್ರಕಾಶನವು ಏರ್ಪಡಿಸಿದ್ದ ಸಮಾರಂಭದಲ್ಲಿ ಬಾಗಲಕೋಟೆಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಘಟಕವು ಪ್ರಕಟಿಸಿರುವ ಬಾಗಲಕೋಟೆಯ ಬಸವೇಶ್ವರ ಕಲಾ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ ಆರ್ ನಾಗರಾಜು ಅವರ ಅಂಕಣ ಬರಹಗಳ ಸಂಕಲನ ‘ಸುವರ್ಣ ಗದ್ದೆ’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಡಾ. ಆರ್. ನಾಗರಾಜು ಅವರು ಸಾಹಿತ್ಯ, ಸಂಸ್ಕೃತಿ, ಶಿಕ್ಷಣ ಮತ್ತು ಸಾಮಾಜಿಕ ಬದುಕಿನ ವಿವಿಧ ಆಯಾಮಗಳನ್ನು ತಮ್ಮ ಲೇಖನಗಳ ಮೂಲಕ ವಿಶ್ಲೇಷಿಸಿದ್ದಾರೆ. ‘ಸುವರ್ಣ ಗದ್ದೆ’ ಕೃತಿ ಓದುಗರಲ್ಲಿ ಚಿಂತನೆಗೆ ಪ್ರೇರಣೆ ನೀಡಲಿ. ಇಂತಹ ಕೃತಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ಮತ್ತಷ್ಟು ಹೊಸ ಓದುಗರನ್ನು ಪರಿಚಯಿಸಲಿ ಎಂದು ಆಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚೀನ ವಸ್ತುಗಳ ಸಂಗ್ರಹಕಾರರು ಹಾಗೂ ಶಾಸನ ತಜ್ಞರಾದ ಬಿಟ್ಟಸಂದ್ರ ಗುರುಸಿದ್ದಯ್ಯ ಅವರು ಮಾತನಾಡಿ, ಸಾಹಿತಿಯ ಬರವಣಿಗೆ ಸಮಾಜಕ್ಕೆ ದಾರಿದೀಪವಾಗಬೇಕು.
ಸಾಹಿತಿ ಎಂದರೆ ಕೇವಲ ಪದಗಳನ್ನು ಜೋಡಿಸುವ ವ್ಯಕ್ತಿಯಲ್ಲ. ಕಾಲದೊಂದಿಗೆ ಸಂವಾದ ನಡೆಸುವ, ಸಮಾಜದ ಅಂತಃಕರಣವನ್ನು ಪ್ರಶ್ನಿಸುವ ಮತ್ತು ಭವಿಷ್ಯದ ದಾರಿಯನ್ನು ತೋರಿಸುವ ಚಿಂತಕ ಎಂದು ಹೇಳಿದರು.
ಒಳ್ಳೆಯ ಸಾಹಿತ್ಯ ಮನುಷ್ಯನನ್ನು ಉತ್ತಮ ಮನುಷ್ಯನನ್ನಾಗಿ ರೂಪಿಸುತ್ತದೆ. ಓದುಗರಲ್ಲಿ ಮಾನವೀಯತೆ, ವೈಚಾರಿಕತೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುತ್ತದೆ ಎಂದು ತಿಳಿಸಿದರು.
ಡಾ. ಆರ್. ನಾಗರಾಜು ಅವರು ತಮ್ಮ ಬರಹಗಳ ಮೂಲಕ ಸಮಾಜದ ಹಲವು ಸಂಗತಿಗಳನ್ನು ವಿಶ್ಲೇಷಿಸುವ ಪ್ರಯತ್ನ ಮಾಡಿದ್ದಾರೆ. ‘ಸುವರ್ಣ ಗದ್ದೆ’ ಎಂಬ ಶೀರ್ಷಿಕೆಯೇ ಓದುಗರಲ್ಲಿ ಕುತೂಹಲ ಮೂಡಿಸುತ್ತದೆ. ಈ ಕೃತಿ ಕೇವಲ ಪುಸ್ತಕವಾಗಿ ಉಳಿಯದೆ, ಓದುಗರಲ್ಲಿ ಪ್ರಶ್ನಿಸುವ ಮನೋಭಾವ ಮತ್ತು ಹೊಸ ಚಿಂತನೆಗಳನ್ನು ಬೆಳೆಸುವಂತಾಗಲಿ ಎಂದು ಹೇಳಿದ ಅವರು ಕೃತಿಕಾರರನ್ನು ಅಭಿನಂದಿಸಿದರು. ಕನ್ನಡ ಸಾಹಿತ್ಯ ಲೋಕದಲ್ಲಿ ಇಂತಹ ವೈಚಾರಿಕ ಕೃತಿಗಳು ನಿರಂತರವಾಗಿ ಪ್ರಕಟವಾಗಲಿ ಎಂದು ಹಾರೈಸಿದರು.
ಸಮಾರಂಭದ ದಿವ್ಯ ಸಾನಿಧ್ಯವನ್ನು ಆಧ್ಯಾತ್ಮಿಕ ಚಿಂತಕಿ ಶ್ರೀಮತಿ ಹನುಮಕ್ಕ ಅವರು ವಹಿಸಿದ್ದರು. ಅನಾಕ ಪ್ರಕಾಶನದ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀಮತಿ ಪಿ ಕವಿತಾ ನಾಗರಾಜು ಅವರು ಸ್ವಾಗತಿಸಿ, ನಿರೂಪಿಸಿದರು. ಕುಮಾರಿ ಜೆಎನ್ ಅನನ್ಯನಾಗ್ ಪ್ರಾರ್ಥಿಸಿ ವಂದಿಸಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ಬಿಟ್ಟಸಂದ್ರ ಗುರು ಸಿದ್ದಯ್ಯ ಅವರು ಲೇಖಕ ಡಾ. ಆರ್ ನಾಗರಾಜು ಮತ್ತು ಡಾ. ಸ್ಮಿತಾ ರೆಡ್ಡಿ ಅವರನ್ನು ಸನ್ಮಾನಿಸಿ ಗೌರವಿಸಿದರು.
