ಬೆಂಗಳೂರು ನಗರ ಜಿಲ್ಲೆ, ಅ.27: ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಎ.ಪಿ. ರಂಗನಾಥ್ ಅವರು ಗೆಲುವು ಸಾಧಿಸಿದ್ದಾರೆ. ಮತ ಎಣಿಕೆಯ ವಿವಿಧ ಸುತ್ತುಗಳಲ್ಲಿ ಎ.ಪಿ. ರಂಗನಾಥ್ ಅವರು ಮುನ್ನಡೆ ಕಾಯ್ದುಕೊಂಡಿದ್ದು, ಅಂತಿಮವಾಗಿ ಗೆಲುವಿನ ಗರಿ ಮುಡಿಗೇರಿಸಿಕೊಂಡಿದ್ದಾರೆ.
ಕರ್ನಾಟಕ ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರ ಹಾಗೂ ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ-2026ರ ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಶಾಂತಿಯುತವಾಗಿ ಮುಕ್ತಾಯಗೊಂಡಿದೆ ಎಂದು ಬೆಂಗಳೂರು ಶಿಕ್ಷಕರ ಕ್ಷೇತ್ರ ಹಾಗೂ ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣಾಧಿಕಾರಿಯೂ ಆಗಿರುವ ಬೆಂಗಳೂರು ಪ್ರಾದೇಶಿಕ ಆಯುಕ್ತರಾದ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು ತಿಳಿಸಿದ್ದಾರೆ.
ಅ. 23 ರಂದು ನಡೆದ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನದಲ್ಲಿ ಒಟ್ಟು 27,405 ಮತದಾರರ ಪೈಕಿ 22,468 ಮಂದಿ ಮತ ಚಲಾಯಿಸಿದ್ದು, ಶೇ.81.98ರಷ್ಟು ಮತದಾನವಾಗಿತ್ತು. ಮತ ಚಲಾಯಿಸಿದವರಲ್ಲಿ 8,360 ಪುರುಷರು ಹಾಗೂ 14,108 ಮಹಿಳೆಯರು.
ಅ.27ರ ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ವೀದಿಯಲ್ಲಿರುವ ಸರ್ಕಾರಿ ಕಲಾ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆದಿತ್ತು.
ಕೊನೆಯ ಸುತ್ತಿನ ಮತ ಎಣಿಕೆಯಲ್ಲಿ ಎ.ಪಿ. ರಂಗನಾಥ್ ಅವರು 10810 ಮತಗಳನ್ನು ಪಡೆದರೆ, ಕಾಂಗ್ರೆಸ್ ಪಕ್ಷದ ಪುಟ್ಟಣ್ಣ ಅವರು 9902 ಮತಗಳನ್ನು ಪಡೆದಿದ್ದರು. ಈ ಸುತ್ತಿನಲ್ಲಿ ರಂಗನಾಥ್ ಅವರು 908 ಮತಗಳ ಮುನ್ನಡೆ ಸಾಧಿಸಿದ್ದರು.
ಇತರೆ ಅಭ್ಯರ್ಥಿಗಳ ಪೈಕಿ ಕರ್ನಾಟಕ ರಾಷ್ಟ್ರ ಸಮಿತಿಯ ಅಭ್ಯರ್ಥಿಯಾದ
ಡಾ. ಜಿ.ಆರ್. ಹೆಬ್ಬೂರು 94 ಮತಗಳು, ಪಕ್ಷೇತರ ಅಭ್ಯರ್ಥಿಯಾದ ಉಮೇಶ್ ಬಾಬು ಪಿಳ್ಳೆಗೌಡ 215 ಮತಗಳು, ಪಕ್ಷೇತರ ಅಭ್ಯರ್ಥಿಯಾದ ಬಿ .ಎಸ್. ನಾಗರಾಜು 11 ಹಾಗೂ ಪಕ್ಷೇತರ ಅಭ್ಯರ್ಥಿಯಾದ ಡಾ. ಎನ್. ಲಕ್ಷ್ಮಣ ಸ್ವಾಮಿ ಅವರು 24 ಮತಗಳನ್ನು ಪಡೆದಿದ್ದಾರೆ.
ಒಟ್ಟು 20616 ಮತಗಳು ಮಾನ್ಯವಾಗಿದ್ದು, 1857 ಮತಗಳು ತಿರಸ್ಕೃತಗೊಂಡಿದೆ ಎಂದು ಬೆಂಗಳೂರು ಶಿಕ್ಷಕರ ಕ್ಷೇತ್ರ ಹಾಗೂ ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಬೆಂಗಳೂರು ಪ್ರಾದೇಶಿಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*****
