ಹೂವು
ನೀರುಣಿಸಿದ ಹೂದೋಟದೊಡೆಯ ಅರಳಿ ನಿಂತ ಹೂವಿಗೆ ಅದು ನನ್ನದೆನ್ನುವನು
ಕೊಯ್ದ ಹೂವ ಕೊಂಡು ಹೊತ್ತು ತರುವ ಹೂಗಾರ ಹೂವಿಗೆ ಅದು ನನ್ನದೆನ್ನುವನು
ದುಂಬಿ ಬರುವ ಮುನ್ನವೆ ಬಣ್ಣಬಣ್ಣದ ಅಂದ ಬೀರಿ ನಗು ಚೆಲ್ಲಿ ನೋವ ನುಂಗುವುದು
ಸೂಜಿಗೆ ಹೂವ ಪೋಣಿಸಿದ ಮಾಲೆಗಾರ ಹೂವಿನ ಮಾಲೆಗೆ ಅದು ನನ್ನದೆನ್ನುವನು
ತೊಟ್ಟು ಕಳಚಿದರೂ ಬಾಡೆನೆಂದು ಹೆಣ್ಣ ಕೇಶದೊಳಗೆ ಮೆರೆವ ಹಮ್ಮು ಅದರದು
ಮೆಚ್ಚಿ ಮುಡಿದ ನಲ್ಲೆಯ ಹೆಳಲ ಹೂವ ಆಘ್ರಾಣಿಸಿ ನಲ್ಲೆಗೆ ಅದು ನನ್ನದೆನ್ನುವನು
ತಾನು ಹೊರಳು ಮಗ್ಗುಲಿಗೆ ಸಿಲುಕಿ ನರಳುವ ಹೊತ್ತು ಬಂದೇಬರುವುದೆಂದು ಗೊತ್ತು
ನಲ್ಲ, ನಗುತ ಕೈಬೀಸಿ ಕರೆವ ಒಸಗೆಯ ಹೂವ ರಾಸಿಗೆ ಅದು ನನ್ನದೆನ್ನುವನು
ಮುದ್ದಿಸಿದವರೆಲ್ಲ ನನ್ನದೇ ಎನ್ನುವರು ‘ಗಟ್ಟಿಸುತ’ ಅದು ಸೇರಬೇಕಿರುವುದು ಅವನಿಗೆ
ಪರಿಮಳ ಸೂಸುವ ಕುಸುಮ ಕಂಡು ದಾರಿಹೋಕನೂ ಅರೆಗಳಿಗೆ ಅದು ನನ್ನದೆನ್ನುವನು

-ಎಂ.ಡಿ.ಬಾವಾಖಾನ ಸುತಗಟ್ಟಿ, ಬೆಳವಡಿ
