ಪ್ಲಾಸ್ಟಿಕ್ ಮುಕ್ತ ಸಮಾಜಕ್ಕೆ ಹೋರಾಟ ಅಗತ್ಯ -ಡಾ. ಅರವಿಂದ ಪಟೇಲ್

ಬಳ್ಳಾರಿ, ನ.4: ನಗರದ ವೀರಶೈವ ವಿದ್ಯಾವರ್ಧಕ ಸಂಘದ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ತಾಲೂಕಿನ ಚೇಳ್ಳಗುರ್ಕಿ ಗ್ರಾಮದಲ್ಲಿ ಮೂರು ದಿನಗಳ ಪೌರತ್ವ ತರಬೇತಿ ಶಿಬಿರ ಆಯೋಜಿಸಿದೆ.

ಶಿಬಿರಕ್ಕೆ ಚಾಲನೆ ನೀಡಿದ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ, ಪರಿಸರ ಪ್ರೇಮಿ, ಕವಿ ಡಾ. ಅರವಿಂದ ಪಟೇಲ್ ಅವರು ಮಾತನಾಡಿ,  ಪ್ಲಾಸ್ಟಿಕ್ ಮುಕ್ತ ಸಮಾಜಕ್ಕಾಗಿ ಜನಜಾಗೃತಿ ಹೋರಾಟ ಅಗತ್ಯ ಎಂದು ಹೇಳಿದರು.

ಪ್ಲಾಸ್ಟಿಕ್ ಬಳಕೆಯಿಂದ ಪರಿಸರ, ಜಲಮೂಲಗಳು, ಮಣ್ಣು, ಪ್ರಾಣಿ-ಪಕ್ಷಿಗಳು ಹಾಗೂ ಮಾನವನ ಆರೋಗ್ಯದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ತಡೆಗಟ್ಟಲು ನಡೆಯುವ ಜನಜಾಗೃತಿ ಮತ್ತು ಸಾಮೂಹಿಕ ಪ್ರಯತ್ನವೇ ಪ್ಲಾಸ್ಟಿಕ್ ಮುಕ್ತ ಹೋರಾಟವೆಂದು ಅಭಿಪ್ರಾಯ ಪಟ್ಟರು. ಕಬೀರದಾಸರ ದೋಹಾವನ್ನು ಉಲ್ಲೇಖಿಸುತ್ತಾ ಕೆಟ್ಟವರನ್ನು ಹುಡುಕುತ್ತಾ ನಾನು ಇಡೀ ಜಗತ್ತನ್ನೇ ಸುತ್ತಾಡಿದೆ. ಆದರೆ ನನಗಿಂತ ಕೆಟ್ಟವರು ಯಾರೂ ಕಾಣಲಿಲ್ಲ. ಕೊನೆಗೆ ನನ್ನ ಹೃದಯವನ್ನೇ ಪರೀಕ್ಷಿಸಿಕೊಂಡಾಗ, ನನ್ನಲ್ಲಿಯೇ ಅನೇಕ ದೋಷಗಳಿರುವುದು ಅರಿವಾಯಿತು ಎಂದರು.  ಇತರರ ನಡವಳಿಕೆ, ಮಾತು, ವ್ಯಕ್ತಿತ್ವ ಮತ್ತು ನಿರ್ಧಾರಗಳನ್ನು ಟೀಕಿಸುವ ಮೊದಲು ನಮ್ಮ ನಡವಳಿಕೆ ಎಷ್ಟು ಸರಿಯಾಗಿದೆ ಎಂಬುದನ್ನು ಈ ಶಿಬಿರದ ಮೂಲಕ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಹಚ್ಚೊಳ್ಳಿ ಶರಣಬಸವನಗೌಡರು ಮಾತನಾಡಿ, ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದರ ಜೊತೆಗೆ ತಾನು ವಹಿಸಿಕೊಂಡಿರುವ ಶಾಲಾ ಕಾಲೇಜುಗಳಲ್ಲಿ ಪ್ಲಾಸ್ಟಿಕ್ ಮುಕ್ತ ಪರಿಸರವನ್ನು ಮೈಗೂಡಿಸಿಕೊಂಡಿದ್ದೇವೆ ಎಂದು ತಿಳಿಸಿದರು.                                                       ಈ ಮೂರು ದಿನಗಳ ಪೌರತ್ವ ತರಬೇತಿ ಶಿಬಿರದಲ್ಲಿ ಶಿಬಿರಾರ್ಥಿಗಳಲ್ಲಿ ಸಾಮಾಜಿಕವಾಗಿ, ಬೌದ್ಧಿಕವಾಗಿ ಹಾಗೂ ಪರಿಸರಾತ್ಮಕವಾಗಿ ಧನಾತ್ಮಕ ಬದಲಾವಣೆಗಳು  ಮೂಡಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ಮಠಂ ಗುರುಪ್ರಸಾದ್, ಸದಾಶಿವನಗೌಡ, ಗವಿಸಿದ್ದಪ್ಪ ಸಿಂದಿಗಿ, ಶಿಬಿರದ ನಿರ್ದೇಶಕರಾದ ಡಾ. ಸತೀಶ್ ಹಿರೇಮಠ್, ಶಿಬಿರದ ಸಂಯೋಜಕರಾದ ಡಾ. ಮಲ್ಲಿಕಾರ್ಜುನ, ಶಿಬಿರಾಧಿಕಾರಿಗಳು ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿನಿ ಅಮೃತ ಪ್ರಾರ್ಥಿಸಿದರು.  ಚಂದ್ರಕಲಾ ಸ್ವಾಗತಿಸಿದರು. ಅಸ್ಫೀಯಾ ಹಾಗೂ ಸಹಾನ ನಿರ್ವಹಿಸಿದರು.

Leave a Reply

Your email address will not be published. Required fields are marked *