ಕಂಪ್ಲಿ ತಾಲೂಕು ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಪತ್ರಕರ್ತ, ಲೇಖಕ ಬಂಗಿ ದೊಡ್ಡ ಮಂಜುನಾಥ ಆಯ್ಕೆ

ಬಳ್ಳಾರಿ, ನ. 3: ಜಿಲ್ಲೆಯ ಕಂಪ್ಲಿ ತಾಲೂಕು ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಪತ್ರಕರ್ತ, ಲೇಖಕ ಬಂಗಿ ದೊಡ್ಡ ಮಂಜುನಾಥ ಆಯ್ಕೆಯಾಗಿದ್ದಾರೆ.

ಬಂಗಿ ದೊಡ್ಡ ಮಂಜುನಾಥ್

ಕಸಾಪ ತಾಲೂಕ ಅಧ್ಯಕ್ಷರ ಷಣ್ಮುಖಪ್ಪ ಚಿತ್ರಗಾರ ಅವರ ಅಧ್ಯಕ್ಷತೆಯಲ್ಲಿ ಈಚೆಗೆ ಕಂಪ್ಲಿಯಲ್ಲಿ ಜರುಗಿದ ತಾಲೂಕು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ.    ಬಂಗಿ ದೊಡ್ಡ ಮಂಜುನಾಥ ಅವರ ಹೆಸರನ್ನು ಸಮ್ಮೇಳನದ ಅಧ್ಯಕ್ಷತೆಗಾಗಿ ಸಾಹಿತಿಗಳಾದ ಜಿ.ಪ್ರಕಾಶ್‌ರವರು ಪ್ರಸ್ತಾಪಿಸಿದರು.  ಎ.ಸಿ.ದಾನಪ್ಪರವರು ಅನುಮೋದಿಸಿದರು. ಅಂತಿಮವಾಗಿ ಬಂಗಿ ದೊಡ್ಡ ಮಂಜುನಾಥ ಇವರನ್ನು ಸರ್ವಾನುಮತದಿಂದ ಎರಡನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಸಭೆಯಲ್ಲಿ ಆಯ್ಕೆ ಮಾಡಲಾಯಿತು.                                            ಕಂಪ್ಲಿ ಪಟ್ಟಣದ  ವೀರಶೈವ ಭವನದಲ್ಲಿ ನ. 13 ರಂದು  ಸಮ್ಮೇಳನ ನಡೆಸಲು ತೀರ್ಮಾನಿಸಲಾಯಿತು.
ತಾಲೂಕಿನ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಗೊಂಡ  ಲೇಖಕ ಬಂಗಿ ದೊಡ್ಡ ಮಂಜುನಾಥರ ನಿವಾಸಕ್ಕೆ ಸೋಮವಾರ ತೆರಳಿದ ಕಸಾಪ‌ ಪದಾಧಿಕಾರಿಗಳು  ಅವರನ್ನು ಗೌರವಿಸಿ ಸಮ್ಮೇಳನಕ್ಕೆ ಅಧಿಕೃತವಾಗಿ ಆಹ್ವಾನಿಸಿದರು.

ಬಂಗಿ ದೊಡ್ಡ ಮಂಜುನಾಥ ಇವರ ಸಂಕ್ಷಿಪ್ತ ಪರಿಚಯ: ಮಂಜುನಾಥ್ ಅವರು
ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದಲ್ಲಿ ದಿ. 02-08-1969ರಂದು ಜನಿಸಿದರು. ಇವರು ಪ್ರಾಥಮಿಕ ಶಿಕ್ಷಣವನ್ನು ಕಂಪ್ಲಿಯ ಪ್ರಭಯ್ಯ ಶಾಲೆ ಹಾಗೂ ಸತ್ಯನಾರಾಯಣಪೇಟೆ ಸಹಿಪ್ರಾ ಶಾಲೆಯಲ್ಲಿ, ಪ್ರೌಢ ಮತ್ತು ಪಿಯು ವಾಣಿಜ್ಯ ಕಾಲೇಜು ಶಿಕ್ಷಣವನ್ನು ಕಂಪ್ಲಿಯ ಷಾ.ಮಿಯಾಚಂದ್ ಸರ್ಕಾರಿ ಪಿಯು ಕಾಲೇಜಿನಲ್ಲಿ, ಬಿಕಾಂ ಪದವಿ ಶಿಕ್ಷಣವನ್ನು ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲಿ ಪಡೆದುಕೊಂಡರು. ಹಂಪೆಯ ಕನ್ನಡ ವಿವಿಯಲ್ಲಿ ದೂರಶಿಕ್ಷಣ ಮೂಲಕ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಕಳೆದ 21 ವರ್ಷಗಳಿಂದ ಪತ್ರಿಕಾ ವರದಿಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದು ವರ್ಷ ‘ಭಾವೈಕ್ಯ’ ಪಾಕ್ಷಿಕ ಪತ್ರಿಕೆಯ ಸಹಸಂಪಾದಕರಾಗಿ, ಒಂದೂವರೆ ವರ್ಷ ‘ಉಷಾ ಕಿರಣ’ ದಿನಪತ್ರಿಕೆಯ ಹೋಬಳಿ ವರದಿಗಾರರಾಗಿ, ಕೆಲ ತಿಂಗಳು ‘ಈ ನಮ್ಮ ಕನ್ನಡನಾಡು’, ‘ವಿಜಯನಗರವಾಣಿ’ ದಿನಪತ್ರಿಕೆಗಳ ವರದಿಗಾರರಾಗಿ, ‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ತಾಲೂಕು ವರದಿಗಾರರಾಗಿ ಸೇವೆ ಸಲ್ಲಿಸಿದ್ದು, ಸದ್ಯ ‘ವಿಜಯವಾಣಿ’ ಪತ್ರಿಕೆಯ ತಾಲೂಕು ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮಂಜುನಾಥ್ ಅವರು  ಕಾದಂಬರಿ, ಲೇಖನ, ಪ್ರಬಂಧ ರಚನೆಯಲ್ಲಿ ತೊಡಗಿಕೊಂಡಿದ್ದಾರೆ.ಈವರೆಗೆಕ ಒಂಬತ್ತು ಕಾದಂಬರಿಗಳನ್ನು, ಒಂದು ಏಕಾಂಕ ನಾಟಕವನ್ನು ರಚಿಸಿದ್ದಾರೆ, ಇವರ ಕೆಲ ಪ್ರಬಂಧಗಳು, ಕತೆಗಳು ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ.

‘ಸಿರಿಗನ್ನಡ’ ಕವನ ಸಂಕಲನದ ಸಂಪಾದಕರಾಗಿ, ಸಂಶೋಧನಾತ್ಮಕ ಪ್ರಬಂಧಗಳ ‘ಕಂಪ್ಲಿ’ ಪ್ರಬಂಧ ಸಂಕಲನದ ಸಹ ಸಂಪಾದಕರಾಗಿರುವುದು ವಿಶೇಷ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ 2024ರ ಪ್ರಬಂಧ ಸಂಕಲನದ ಸಂಪಾದಕರಾಗಿದ್ದಾರೆ.
2025ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಮಂಜುನಾಥ್,  ಕೊಳ್ಳೇಗಾಲದ ಸಾಹಿತ್ಯ ಮಿತ್ರಕೂಟದ ರಾಜ್ಯಮಟ್ಟದ ಕಾದಂಬರಿ ಸ್ಪರ್ಧೆಯಲ್ಲಿ ‘ಅರಳು ಮಲ್ಲಿಗೆ’ ಕಾದಂಬರಿಗೆ 10 ಸಾವಿರ ರೂಪಾಯಿಗಳ ನಗುದು ಪುರಸ್ಕಾರದೊಂದಿಗೆ ಮೊದಲ ಬಹುಮಾನ ಗಳಿಸಿರುವುದು ಗಮನಾರ್ಹ.

ಇವರ ‘ತೈಲವಿಲ್ಲದ ಜ್ಯೋತಿ’ ಕೃತಿಗೆ ಆಜೂರ ಪ್ರತಿಷ್ಠಾನದ ರಾಜ್ಯಮಟ್ಟದ ಪ್ರಶಸ್ತಿ ಹಾಗೂ ‘ಬೆಂಕಿಯ ಶೀತ’ ಕಾದಂಬರಿಗೆ ಸೇಡಂನ ರಾಜ್ಯಮಟ್ಟದ ಕೋಡೆಕಲ್ಲ ಚನ್ನಬಸವಣ್ಣ ಪ್ರಕಾಶನದ ‘ಕಂದ’ ಪ್ರಶಸ್ತಿ ದೊರಕಿದೆ.  ಹೊಸಪೇಟೆಯ ಸಂಗೀತ ಭಾರತಿ ಸಂಸ್ಥೆಯ ಸಮಾಜ ಸೇವಾ ಭಾರ್ಗವ ಪ್ರಶಸ್ತಿ, ಕನ್ನಡ ಹಿತ ರಕ್ಷಕ ಸಂಘದ ಸ್ಥಳೀಯ ಕಲಾವಿದ ಸೇರಿದಂತೆ ನಾನಾ ಪ್ರಶಸ್ತಿ, ಗೌರವ ಪುರಸ್ಕಾರಗಳು ದೊರೆತಿವೆ.

ಗಂಗಾವತಿಯ ಕೊಲ್ಲಿ ನಾಗೇಶ್ವರರಾವ್ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳು ಮಂಜುನಾಥ್ ಅವರ ಕುರಿತು 2025-26ನೇ ಸಾಲಿನಲ್ಲಿ  ಕಾದಂಬರಿ, ಬದುಕು ಬರಹದ ಬಗ್ಗೆ ಕಿರು ಪ್ರಬಂಧ ರಚಿಸಿದ್ದಾರೆ.

ಮಂಜುನಾಥ್
ಕಂಪ್ಲಿ ತಾಲೂಕು ಕಸಾಪ ಗೌರವ ಕಾರ್ಯದರ್ಶಿಗಳಾಗಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷರಾಗಿ, ಶರಣ ಸಾಹಿತ್ಯ ಪರಿಷತ್ತಿನ ಕಾರ್ಯಾಧ್ಯಕ್ಷರಾಗಿ, ದೇವಾಂಗ ಸಮಾಜ ಸಂಘದ ಕಾರ್ಯದರ್ಶಿಗಳಾಗಿ, ಕನ್ನಡ ಹಿತರಕ್ಷಕ ಸಂಘದ ನಿರ್ದೇಶಕರು, ಸಾಹಿತ್ಯ ಸಿರಿ ಪ್ರತಿಷ್ಠಾನದ ನಿರ್ದೇಶಕರಾಗಿ ಸೇರಿ ನಾನಾ ಸಂಘಟನೆಗಳಲ್ಲಿ ತೊಡಗಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ.

—–

Leave a Reply

Your email address will not be published. Required fields are marked *