ಕವಿತೆಗಳೇ ಹಾಗೆ….!
ಸುಮ್ಮನಿರುವುದಿಲ್ಲ.. ಎದೆಯಾಳವ ಕಲಕಿ,
ಕರುಳ ಹಿಂಡಿ,
ಹೊರಬಂದ ಕವಿತೆ..
ಅವನನ್ನು
ಬೆತ್ತಲು ಮಾಡುತ್ತವೆ.
ಕಟಕಟೆಗೆ ಹಾಕುತ್ತವೆ.
ನ್ಯಾಯ ಕೇಳುತ್ತವೆ.
ಪುರಾವೆ ಕೇಳುತ್ತವೆ.
ಕವಿತೆಗಳೇ ಹಾಗೆ..
ಇನ್ನೇನು ಕೈಗೆ..
ಸಿಕ್ಕಿತೆನ್ನುವಷ್ಟರಲಿ,
ಆಗಸಕ್ಕೆ ನೆಗೆದು
ವಿಶ್ವರೂಪವ
ತೋರಿ ಬಿಡುತ್ತವೆ.
ಮರುಕ್ಷಣವೇ..
ವಾಮನನಾಗಿ
ತಲೆಯ ಮೇಲೆ
ಕಾಲಿಕ್ಕುತ್ತವೆ.
ಕೆಲವರಿಗೆ..
ಸಂತೆಯಲಿ ಕಳೆದ
ಕೂಸಾಗಿ ಬಿಡುತ್ತವೆ.
ಕವಿತೆಗಳೇ ಹಾಗೆ..
ಕೆಲವರ ಬಳಿ
ಕಾಡಿ ಬೇಡಿ
ಬರೆಸಿಕೊಳ್ಳುತ್ತವೆ.
ಕೆಲವರ ..
ಅಡಿಯಾಳಾಗುತ್ತವೆ.
ಕವಿತೆಗಳೇ ಹಾಗೆ..
ಕೆಲವು..
ಕಣ್ಣೀರನೊರೆಸಿದರೆ..
ಕೆಲವು..
ಕೈ ಹಿಡಿದು
ಮುನ್ನಡೆಸುತ್ತವೆ.
ಕೆಲವು..
ಮಾಯಾಚಾಪೆಯಲಿ..
ಕೂರಿಸಿ..
ವಿಶ್ವದರ್ಶನ
ಮಾಡಿಸುತ್ತವೆ..
ಕೆಲವು..
ಎದೆಯ ಹಾಡಾಗಿ.. .
ಬೆಳೆದು ಹೆಮ್ಮರವಾಗಿ
ಬೀಜಗಳಾಗುತ್ತವೆ.
ಕವಿತೆಗಳೇ ಹಾಗೆ..
ಬರೆಸಿಕೊಂಡಾಕ್ಷಣ.
ಆಗಸಕ್ಕೆ
ಹಾರಿಬಿಡುತ್ತವೆ.
ಕೆಲವು ಬೀದಿ ಬದಿಯ
ಹೆಣವಾಗುತ್ತವೆ.
ಗುಟ್ಟು ಬಿಟ್ಟುಕೊಡದ..
ಕವಿತೆ ಮಧ್ಯದಲಿ
ತೂರಿ ಬಂದು
ಎದೆಗೆ ಬಾಣ
ಹಾರಿಸಿ ಬಿಡುತ್ತವೆ.
ನನಗಚ್ಚರಿ..
ಈ ಮಣ್ಣಿನಲಿ..
ಹುಟ್ಟಿದ ಕವಿತೆ,
ಹೊಸ ಮಣ್ಣಿನಲಿ..
ಬೆಳೆದು.. ಹೂವು
ಹಣ್ಣುಗಳಾಗಿ
ಅರಳುವುದು.
ಇಲ್ಲಿನ ಕವಿತೆ..
ಯಾವುದೋ..
ಬಾಣಸಿಗನ ಕೈಗೆ ಸಿಕ್ಕು,
ಹೊಸ ರುಚಿಗಳ ಹುಟ್ಟಿಸಿ,
ಹಸಿದ ರುಚಿಮೊಗ್ಗುಗಳ
ಅರಳಿಸುವುದು.
ಕವಿತೆಗಳೇ ಹಾಗೆ.. ಮಕ್ಕಳನ್ನು ತಬ್ಬಿದ
ಹಾಗೆ.

-ಡಾ.ಕೆ.ಜಿ.ಮಹೇಶ್ವರಪ್ಪ, ಶಿವಮೊಗ್ಗ
