
ಬಳ್ಳಾರಿ, ನ.12: ಮುಂಬರುವ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಮತದಾನದ ಹಕ್ಕು ಪಡೆಯಲು ಸದಸ್ಯತ್ವ ಹೊಂದಿರಬೇಕಾದ ಅವಧಿಗೆ ಸಂಬಂಧಿಸಿದ ನಿಯಮವನ್ನು ಮರುಪರಿಶೀಲಿಸಿ, ಚುನಾವಣಾ ಅಧಿಸೂಚನೆ ಪ್ರಕಟವಾಗುವುದಕ್ಕೂ ಮುನ್ನ ಅಧಿಕೃತ ಸದಸ್ಯತ್ವ ಪಡೆದಿರುವ ಎಲ್ಲ ಅರ್ಹ ಸದಸ್ಯರಿಗೂ ಮತದಾನದ ಅವಕಾಶ ಕಲ್ಪಿಸಬೇಕೆಂದು ನಿವೃತ್ತ ಪ್ರಾಚಾರ್ಯ ಎಚ್.ಎಂ. ಮಲ್ಲಿಕಾರ್ಜುನ ಸ್ವಾಮಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿಗೆ ಇ-ಮೇಲ್ ಮೂಲಕ ಸವಿಸ್ತಾರವಾದ ಮನವಿ ಪತ್ರವನ್ನು ರವಾನಿಸಿರುವ ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯತ್ವ ಪಡೆದಿರುವ ವ್ಯಕ್ತಿಗಳಿಗೆ ಕೇವಲ ಸದಸ್ಯತ್ವದ ಅವಧಿಯ ನೆಪದಲ್ಲಿ ಮತದಾನದ ಹಕ್ಕು ನಿರಾಕರಿಸುವುದು ನ್ಯಾಯಸಮ್ಮತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕನ್ನಡ ನಾಡು, ನುಡಿ, ನೆಲ, ಜಲ ಹಾಗೂ ಸಾಹಿತ್ಯದ ಬಗ್ಗೆ ಅಪಾರ ಅಭಿಮಾನ ಹೊಂದಿರುವ ತಾವು ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯತ್ವ ಪಡೆದು ಅಧಿಕೃತ ಗುರುತಿನ ಚೀಟಿಯನ್ನೂ ಹೊಂದಿರುವುದಾಗಿ ತಿಳಿಸಿರುವ ಅವರು ಚುನಾವಣೆಯಲ್ಲಿ ಮತದಾನ ಮಾಡಲು ಸದಸ್ಯತ್ವ ಪಡೆದ ದಿನದಿಂದ ನಿರ್ದಿಷ್ಟ ಅವಧಿ ಪೂರ್ಣಗೊಂಡಿರಬೇಕೆಂಬ ನಿಯಮದಿಂದಾಗಿ ಹೊಸದಾಗಿ ಸದಸ್ಯರಾದ ಅನೇಕ ಕನ್ನಡಾಭಿಮಾನಿಗಳು ಮತದಾನದ ಹಕ್ಕಿನಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಚುನಾವಣೆಯ ಅಧಿಸೂಚನೆ ಹೊರಬರುವುದಕ್ಕೂ ಮುನ್ನವೇ ಅಧಿಕೃತವಾಗಿ ಸದಸ್ಯತ್ವ ಪಡೆದಿರುವ ವ್ಯಕ್ತಿ ಪರಿಷತ್ತಿನ ಸದಸ್ಯನಲ್ಲವೇ? ಸದಸ್ಯತ್ವ ನೀಡಿದ ನಂತರವೂ ಮತದಾನದ ಹಕ್ಕು ನಿರಾಕರಿಸಲು ಇರುವ ಸಮಂಜಸ ಕಾರಣವೇನು? ಎಂಬ ಪ್ರಶ್ನೆಗಳನ್ನು ಮುಂದಿಟ್ಟಿರುವ ಅವರು, ಕಾಲಕ್ಕೆ ತಕ್ಕಂತೆ ಪರಿಷತ್ತಿನ ಚುನಾವಣಾ ನಿಯಮಗಳನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
ಚುನಾವಣಾ ಅಧಿಸೂಚನೆ ಪ್ರಕಟವಾಗುವ ದಿನಾಂಕವನ್ನು ಆಧಾರವಾಗಿಟ್ಟುಕೊಂಡು, ಅದಕ್ಕೂ ಮುನ್ನ ಅಧಿಕೃತವಾಗಿ ಸದಸ್ಯತ್ವ ಪಡೆದಿರುವ ಎಲ್ಲ ಅರ್ಹ ಸದಸ್ಯರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ವ್ಯವಸ್ಥೆ ರೂಪಿಸಬೇಕು. ಹೊಸದಾಗಿ ಸದಸ್ಯತ್ವ ಪಡೆದವರನ್ನು ಕೇವಲ ಸದಸ್ಯತ್ವದ ಅವಧಿಯ ಕಾರಣದಿಂದ ಮತದಾನದ ಹಕ್ಕಿನಿಂದ ವಂಚಿಸಬಾರದು. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಾ ತಿದ್ದುಪಡಿ ಮಾಡಿ, ಭವಿಷ್ಯದ ಚುನಾವಣೆಗಳಲ್ಲಿಯೂ ಹೊಸ ಸದಸ್ಯರಿಗೆ ನ್ಯಾಯಸಮ್ಮತ ಮತದಾನದ ಅವಕಾಶ ಕಲ್ಪಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಅಗತ್ಯವಿದ್ದಲ್ಲಿ ಪರಿಷತ್ತಿನ ಆಡಳಿತಾಧಿಕಾರಿಗಳು, ಕಾನೂನು ತಜ್ಞರು ಹಾಗೂ ಕನ್ನಡ ಸಾಹಿತ್ಯ ಕ್ಷೇತ್ರದ ಹಿರಿಯರ ಅಭಿಪ್ರಾಯ ಪಡೆದು ಸೂಕ್ತ ತೀರ್ಮಾನ ಕೈಗೊಳ್ಳುವಂತೆಯೂ ಅವರು ಕೋರಿದ್ದಾರೆ.
ಸಮಸ್ತ ಕನ್ನಡಿಗರ ಬೆಂಬಲಕ್ಕೆ ಮನವಿ
ಈ ಬೇಡಿಕೆ ಕೇವಲ ತಮ್ಮ ವೈಯಕ್ತಿಕ ಹಿತಾಸಕ್ತಿಗೆ ಸಂಬಂಧಿಸಿದ್ದಲ್ಲ; ತಮ್ಮಂತೆಯೇ ಹೊಸದಾಗಿ ಸದಸ್ಯತ್ವ ಪಡೆದಿರುವ ಸಾವಿರಾರು ಕನ್ನಡಾಭಿಮಾನಿಗಳ ನ್ಯಾಯಸಮ್ಮತ ಹಕ್ಕಿಗೆ ಸಂಬಂಧಿಸಿದ ವಿಚಾರವಾಗಿದೆ ಎಂದು ಎಚ್.ಎಂ. ಮಲ್ಲಿಕಾರ್ಜುನ ಸ್ವಾಮಿ (ಮಹಿಮ)ತಿಳಿಸಿದ್ದಾರೆ.

ಆದ್ದರಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು, ವಿವಿಧ ಕನ್ನಡಪರ ಸಂಘಟನೆಗಳು, ಕನ್ನಡ ಸಂಘ-ಸಂಸ್ಥೆಗಳು, ಸಾಹಿತಿಗಳು, ಲೇಖಕರು, ಬರಹಗಾರರು ಹಾಗೂ ಕನ್ನಡ ಮನಸ್ಸುಗಳು ಈ ನ್ಯಾಯಸಮ್ಮತ ಬೇಡಿಕೆಗೆ ಬೆಂಬಲ ಸೂಚಿಸಬೇಕು. ಹೊಸ ಸದಸ್ಯರ ಮತದಾನದ ಹಕ್ಕಿನ ಪರವಾಗಿ ಎಲ್ಲರೂ ಒಗ್ಗಟ್ಟಿನಿಂದ ಧ್ವನಿ ಎತ್ತಿ, ಸರ್ಕಾರದ ಗಮನ ಸೆಳೆಯಬೇಕೆಂದು ಅವರು ಸಮಸ್ತ ಕನ್ನಡಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಕೇವಲ ಒಂದು ಸಂಸ್ಥೆಯಲ್ಲ. ಅದು ಕನ್ನಡಿಗರ ಸ್ವಾಭಿಮಾನ, ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರತೀಕವಾಗಿದೆ. ಕನ್ನಡದ ಮೇಲಿನ ಪ್ರೀತಿ ಮತ್ತು ಅಭಿಮಾನದಿಂದ ಸದಸ್ಯತ್ವ ಪಡೆಯುವ ಪ್ರತಿಯೊಬ್ಬರಿಗೂ ಸಂಸ್ಥೆಯ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯಬೇಕು ಎಂಬುದು ಅವರ ಆಶಯವಾಗಿದೆ.
“ಕನ್ನಡಿಗರ ಸದಸ್ಯತ್ವಕ್ಕೆ ಗೌರವ ಇರಲಿ, ಕನ್ನಡಾಭಿಮಾನಿಗಳ ಪ್ರಜಾಸತ್ತಾತ್ಮಕ ಹಕ್ಕುಗಳಿಗೆ ಅವಕಾಶ ಇರಲಿ” ಎಂಬ ಆಶಯದೊಂದಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಿರುವ ಎಚ್.ಎಂ. ಮಲ್ಲಿಕಾರ್ಜುನ ಸ್ವಾಮಿ (ಮಹಿಮ)ಅವರ ಈ ಪ್ರಯತ್ನಕ್ಕೆ ಕನ್ನಡಪರ ಸಂಘಟನೆಗಳು, ಸಾಹಿತಿಗಳು ಹಾಗೂ ಕನ್ನಡಾಭಿಮಾನಿಗಳಿಂದ ಯಾವ ರೀತಿಯ ಸ್ಪಂದನೆ ದೊರೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
