ಕನ್ನಡಪ್ರಭ ವಿಶೇಷ ಪುರವಣಿ ಲೋಕಾರ್ಪಣೆ: ಕನ್ನಡ ಭಾಷೆ, ಸಂಸ್ಕೃತಿ ಬೆಳವಣಿಗೆಗೆ ಸಮಾಜಮುಖಿ ವೈ.ಮಹಾಬಲೇಶ್ವರಪ್ಪರವರ ಕೊಡುಗೆ ಅಪಾರ – ಹಿರಿಯ ಚಿಂತಕ ಸಿ.ಚನ್ನಬಸವಣ್ಣ ಶ್ಲಾಘನೆ

ಸಿ.ಚನ್ನಬಸವಣ್ಣ 

ಬಳ್ಳಾರಿ, ನ.12:  ಗಡಿ ಭಾಗಗಳಲ್ಲಿ ಕನ್ನಡ ಶಾಲೆಗಳನ್ನು ಆರಂಭಿಸಿ ಕನ್ನಡಭಾಷೆ, ಸಂಸ್ಕೃತಿ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ ವೈ.ಮಹಾಬಲೇಶ್ವರಪ್ಪನವರು
ಜಿಲ್ಲೆಯ ಸಮಷ್ಠಿ ಪ್ರಜ್ಞೆಯಂತೆ ಕೆಲಸ ಮಾಡಿದರು. ತಮ್ಮ ಆಯುಷ್ಯದ ಬಹುಭಾಗವನ್ನು
ಸಮಾಜಮುಖಿ ಸೇವೆಯಲ್ಲಿಯೇ ತೊಡಗಿಸಿಕೊಂಡಿದ್ದರು ಎಂದು ಹಿರಿಯ ಚಿಂತಕ ಹಾಗೂ ಲೋಹಿಯಾ
ಪ್ರಕಾಶನದ ಮುಖ್ಯಸ್ಥ ಸಿ.ಚನ್ನಬಸವಣ್ಣ ಸ್ಮರಿಸಿ ಶ್ಲಾಘಿಸಿದರು.

ಕನ್ನಡದ ಕಟ್ಟಾಳು ವೈ.ಮಹಾಬಲೇಶ್ವರಪ್ಪನವರ ಸಂಸ್ಮರಣೆ ಹಿನ್ನಲೆಯಲ್ಲಿ ಗುರುವಾರ ನಗರದ ಜಾನಪದ
ಹೋಟೆಲ್ ಸಭಾಂಗಣದಲ್ಲಿ ಕನ್ನಡಪ್ರಭ ಹೊರತಂದ ವಿಶೇಷ ಪುರವಣಿಗೆ ಲೋಕಾರ್ಪಣೆಗೊಳಿಸಿ
ಅವರು ಮಾತನಾಡಿದರು.
ಮಹಾಬಲೇಶ್ವರಪ್ಪನವರು ಬರೀ ಕನ್ನಡಪ್ರೇಮಿ, ಶಿಕ್ಷಣ ಪ್ರೇಮಿಯಷ್ಟೇ ಅಲ್ಲ;
ದೂರದೃಷ್ಟಿಯುಳ್ಳ ಜನನಾಯಕರಾಗಿದ್ದರು. ಭಾಷೆ ಮತ್ತು ಸಂಸ್ಕೃತಿಯ ಜತನಕ್ಕಾಗಿ
ಅಪಾರವಾಗಿ ಶ್ರಮಿಸಿದ ಮಹನೀಯರು. ಶ್ರೀಮಂತ ಮನೆತನದಲ್ಲಿ ಹುಟ್ಟಿದ್ದರೂ ಸರಳ ಜೀವನ
ಶೈಲಿಯನ್ನು ಅಳವಡಿಸಿಕೊಂಡಿದ್ದರು. ಸರ್ವದರ್ಶನ ತೀರ್ಥ ವೈ.ನಾಗೇಶ ಶಾಸ್ತ್ರಿಗಳ
ಸಂಪರ್ಕ ಬಂದ ಬಳಿಕ ವೈ.ಮಹಾಬಲೇಶ್ವಪ್ಪನವರ ಬದುಕಿನ ಮೇಲೆ ಗಾಢವಾದ ಪರಿಣಾಮ ಬೀರಿತು.
ಸಣ್ಣ ವಯಸ್ಸಿನಲ್ಲಿಯೇ ಜಿಲ್ಲಾಡಳಿತ ಚುಕ್ಕಾಣಿ ಹಿಡಿದ ವೈ.ಮಹಾಬಲೇಶ್ವರಪ್ಪನವರು ತಮ್ಮ
ಕಾರ್ಯ ವೈಖರಿ ಮೂಲಕ ಮತ್ತಷ್ಟೂ ಜನಮನ್ನಣೆ ಗಳಿಸಿದರು. ತಮ್ಮ ಅಧಿಕಾರ ಅವಧಿಯಲ್ಲಿ
ಗ್ರಾಮೀಣ ಅಭಿವೃದ್ಧಿಗೆ ಆದ್ಯತೆ ನೀಡಿ ಹಳ್ಳಿಗಳ ಮೂಲ ಸೌಕರ್ಯಗಳನ್ನು ಹೆಚ್ಚಿಸಿದರು
ಎಂದು ತಿಳಿಸಿದರು.

ವೀರಶೈವ ಕಾಲೇಜು ಎಂದು ಹೆಸರಿಡುವ ಹಿಂದೆ ವೈ.ಮಹಾಬಲೇಶ್ವರಪ್ಪನವರ ಹೋರಾಟದ ಕೊಡುಗೆ
ದೊಡ್ದದಿದೆ. ಶಿಕ್ಷಣ ಸಂಸ್ಥೆಗೆ ‘ವೀರಶೈವ ಕಾಲೇಜು’ ಎಂಬ ಹೆಸರನ್ನಿಡಲು
ನಿರ್ಧರಿಸಿದಾಗ ಅಂದಿನ ಮದ್ರಾಸ್ ವಿಶ್ವವಿದ್ಯಾಲಯದ ಆಡಳಿತ ವಲಯದಿಂದ ಆಕ್ಷೇಪ
ವ್ಯಕ್ತವಾಯಿತು. ‘ವೀರಶೈವ’ ಎಂಬ ಪದವು ಒಂದು ನಿರ್ದಿಷ್ಟ ಸಮುದಾಯ ಅಥವಾ
ಜಾತಿಯನ್ನು ಸೂಚಿಸುವುದರಿಂದ, ಶಿಕ್ಷಣ ಸಂಸ್ಥೆಗೆ ಇಂತಹ ಹೆಸರನ್ನು ಇಡುವುದು
ಸೂಕ್ತವಲ್ಲ ಎಂಬ ಅಭಿಪ್ರಾಯವನ್ನು ವಿಶ್ವವಿದ್ಯಾಲಯದ ಪ್ರಮುಖರು ವ್ಯಕ್ತಪಡಿಸಿದ್ದರು.
ಆದರೆ, ವಿಶ್ವವಿದ್ಯಾಲಯದ ಈ ಆಕ್ಷೇಪಕ್ಕೆ ಮಹಾಬಲೇಶ್ವರಪ್ಪನವರು ಸುಮ್ಮನೆ ಮಣಿಯಲಿಲ್ಲ.
ತಾವು ಆಯ್ಕೆ ಮಾಡಿಕೊಂಡ ಹೆಸರಿನ ಹಿಂದೆ ಯಾವುದೇ ತಪ್ಪು ಉದ್ದೇಶವಿಲ್ಲ ಎಂಬುದನ್ನು
ಸಮರ್ಥಿಸಿಕೊಳ್ಳುವುದರ ಜತೆಗೆ, ತಮ್ಮ ವಾದವನ್ನು ತಾರ್ಕಿಕವಾಗಿ ಮಂಡಿಸಲು ಮುಂದಾದರು.
ಶಿಕ್ಷಣ ಸಂಸ್ಥೆಯ ಹೆಸರಿನ ವಿಚಾರದಲ್ಲಿ ಒಂದು ರೀತಿಯ ಮಾನದಂಡವನ್ನು ಅನುಸರಿಸಬೇಕಾದರೆ
ಅದು ಎಲ್ಲ ಸಂಸ್ಥೆಗಳಿಗೂ ಸಮಾನವಾಗಿ ಅನ್ವಯವಾಗಬೇಕು ಎಂಬುದು ಅವರ ನಿಲುವಾಗಿತ್ತು. ಈ
ಸಂದರ್ಭದಲ್ಲಿ ಅವರು ವಿಶ್ವವಿದ್ಯಾಲಯದ ಪ್ರಮುಖರ ಮುಂದಿಟ್ಟ ಪ್ರಶ್ನೆ ಅತ್ಯಂತ
ಗಮನಾರ್ಹವಾಗಿತ್ತು. ‘ವೀರಶೈವ’ ಎಂಬ ಪದ ಜಾತಿಸೂಚಕವಾಗಿದ್ದರೆ, ಮದ್ರಾಸಿನಲ್ಲಿ
ಈಗಾಗಲೇ ಕ್ರಿಶ್ಚಿಯನ್ ಕಾಲೇಜು, ಹಿಂದೂ ಕಾಲೇಜು ಎಂಬ ಹೆಸರುಗಳಿಂದ ಶಿಕ್ಷಣ
ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆಯಲ್ಲವೇ? ಅವುಗಳ ಹೆಸರುಗಳು ನಿರ್ದಿಷ್ಟ
ಧರ್ಮವನ್ನು ಪ್ರತಿನಿಧಿಸುವುದಿಲ್ಲವೇ? ಹಾಗಾದರೆ, ವೀರಶೈವ ಎಂಬ ಹೆಸರನ್ನು ಮಾತ್ರ ಏಕೆ
ಆಕ್ಷೇಪಿಸಬೇಕು? ಎಂಬ ಪ್ರಶ್ನೆಯನ್ನು ಮುಂದಿಟ್ಟರು. ಅಷ್ಟೇ ಅಲ್ಲ, ಮದ್ರಾಸಿನಲ್ಲಿರುವ
ಕ್ರಿಶ್ಚಿಯನ್ ಕಾಲೇಜು ಮತ್ತು ಹಿಂದೂ ಕಾಲೇಜುಗಳ ಹೆಸರುಗಳನ್ನು ಬದಲಾಯಿಸುವುದಾದರೆ,
ತಾವು ಕೂಡ ವೀರಶೈವ ಎಂಬ ಹೆಸರನ್ನು ಬದಲಾಯಿಸಲು ಸಿದ್ಧರಿರುವುದಾಗಿ ಸ್ಪಷ್ಟಪಡಿಸಿದರು.
ಹೆಸರಿನ ವಿಚಾರದಲ್ಲಿ ಎಲ್ಲರಿಗೂ ಒಂದೇ ರೀತಿಯ ನಿಯಮ ಇರಬೇಕು. ಒಂದು ಹೆಸರಿಗೆ ಅನುಮತಿ
ನೀಡಿ, ಮತ್ತೊಂದು ಹೆಸರಿಗೆ ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ ಎಂಬ ಸಮಾನತೆಯ
ತತ್ವವನ್ನು ತಮ್ಮ ವಾದದ ಮೂಲಕ ಪ್ರತಿಪಾದಿಸಿದರು. ಮಹಾಬಲೇಶ್ವರಪ್ಪನವರ ಈ ಪ್ರಶ್ನೆ
ಮತ್ತು ವಾದದಲ್ಲಿ ಅಡಕವಾಗಿದ್ದ ನ್ಯಾಯಸಮ್ಮತತೆ ವಿಶ್ವವಿದ್ಯಾಲಯದ ಪ್ರಮುಖರ ಗಮನ
ಸೆಳೆಯಿತು. ಕೇವಲ ಭಾವನಾತ್ಮಕವಾಗಿ ಮಾತನಾಡದೆ, ಉದಾಹರಣೆಗಳ ಮೂಲಕ ತಮ್ಮ ನಿಲುವನ್ನು
ಸಮರ್ಥಿಸಿಕೊಂಡ ಅವರ ತಾರ್ಕಿಕ ಚಿಂತನೆಗೆ ಆಡಳಿತ ವಲಯದವರು ಒಪ್ಪಿಗೆ ಸೂಚಿಸಿದರು.
ಅಂತಿಮವಾಗಿ ‘ವೀರಶೈವ ಕಾಲೇಜು’ ಎಂಬ ಹೆಸರಿನೊಂದಿಗೆ ಸಂಸ್ಥೆ ಮುಂದುವರಿಯಲು
ಅನುಮತಿ ದೊರೆಯಿತು ಎಂದು ವಿವರಿಸಿದರು.           ಇದೇ ವೇಳೆ ವೈ.ಮಹಾಬಲೇಶ್ವಪ್ಪನವರು ಕನ್ನಡ,
ಭಾಷೆ, ನೆಲ, ಜಲದ ಬಗ್ಗೆ ಅವರಿಗಿದ್ದ ಅಪಾರ ಅಭಿಮಾನವನ್ನು ಚಿಂತಕ ಸಿ.ಚನ್ನಬಸವಣ್ಣ
ಅವರು ಮೆಲುಕು ಹಾಕಿದರು.              ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಧಾನಪರಿಷತ್ ಸದಸ್ಯ
ಹಾಗೂ ವೈ.ಮಹಾಬಲೇಶ್ವರಪ್ಪನವರ ಮೊಮ್ಮಗ ವೈ.ಎಂ.ಸತೀಶ್ ಅವರು ತಮ್ಮ ಬಾಲ್ಯದ ದಿನಗಳು,
ತಾತನ ಜೊತೆಗಿನ ನೆನಪುಗಳನ್ನು ಸ್ಮರಿಸಿಕೊಂಡರು. ಕನ್ನಡಪ್ರಭ ಪ್ರತಿವರ್ಷ ನನ್ನ ತಾತನ
ಕುರಿತಾದ ಪುರವಣಿ ಹೊರತಂದು ಸಾರ್ಥಕತೆಯ ಕಾರ್ಯ ನಿರ್ವಹಿಸುತ್ತಿದೆ ಎಂದು
ಸ್ಮರಿಸಿದರು.                                               ಕನ್ನಡಪ್ರಭ ಬಳ್ಳಾರಿ ಜಿಲ್ಲಾ ವಿಶೇಷ ವರದಿಗಾರ ಕೆ.ಎಂ.ಮಂಜುನಾಥ ಅವರು
ಪ್ರಾಸ್ತಾವಿಕ ಮಾತನಾಡಿದರು. ಸುವರ್ಣ ನ್ಯೂಸ್‌ನ ಹಿರಿಯ ವರದಿಗಾರ ನರಸಿಂಹಮೂರ್ತಿ
ಕುಲಕರ್ಣಿ ಹಾಗೂ ಕನ್ನಡಪ್ರಭ ಛಾಯಾಗ್ರಾಹಕ ಪುರುಷೋತ್ತಮ ಹಂದ್ಯಾಳು ಕಾರ್ಯಕ್ರಮ
ನಿರ್ವಹಿಸಿದರು.

ಲೇಖಕರಾದ ಸಿದ್ಧರಾಮ ಕಲ್ಮಠ, ಡಾ. ದಸ್ತಗೀರ್ ಸಾಬ್ ದಿನ್ನಿ, ವೀರೇಂದ್ರ ರಾವಿಹಾಳು, ರಂಗತೋರಣದ
ಪ್ರಭುದೇವ ಕಪ್ಪಗಲ್ಲು, ಗಾಯಕ ಯಲ್ಲನಗೌಡ ಶಂಕರಬಂಡೆ, ಸನ್ಮಾರ್ಗ ಗೆಳೆಯರ ಬಳಗದ ಕಾರ್ಯದರ್ಶಿ
ಚಂದ್ರಶೇಖರ ಆಚಾರ್ ಕಪ್ಪಗಲ್ಲು, ಹಿರಿಯ ವಕೀಲ ಅಂಕಲಯ್ಯ, ಲೆಕ್ಕ ಪರಿಶೋಧಕರಾದ
ಸಿದ್ಧರಾಮೇಶ್ವರಗೌಡ ಕರೂರು, ಪತ್ರಕರ್ತ ಶಶಿಧರ ಮೇಟಿ, ತಿಮ್ಮಪ್ಪ ಜೋಳದರಾಶಿ, ಸಿಎ
ಎರಿಸ್ವಾಮಿ ಚಿಲ್ಕರಾಯಿ, ಎಸ್‌ಜಿ ಕಾಲೇಜು ಪ್ರಾಂಶುಪಾಲ ಗೋವಿಂದರಾಜು, ನಿವೃತ್ತ
ಪ್ರಾಂಶುಪಾಲ ಲಿಂಗರಾಜ್, ಅಡವಿಸ್ವಾಮಿ, ರಂಗಕರ್ಮಿ ಶಿವೇಶ್ವರಗೌಡ ಕಲ್ಲುಕಂಬ,
ಜೋಳದರಾಶಿ ಪಂಪನಗೌಡ, ಪಿ.ಎಂ.ಮಂಜುನಾಥ, ಜೋಳದರಾಶಿ ಬಸವರಾಜಸ್ವಾಮಿ, ಸಿದ್ಧಲಿಂಗ
ಸ್ವಾಮಿ, ಉಪನ್ಯಾಸಕ ಜೆ.ಸೋಮಶೇಖರ್, ವಿ.ಶಿವಾಚಾರಿ, ಪತ್ರಕರ್ತರಾದ ಮಾರುತಿ ಸುಣಗಾರ,
ಆರಾಧ್ಯ, ಬಸವರಾಜ ಹರನಹಳ್ಳಿ, ಅಂಬರೀಶ್ ಯಾದಗಿರಿ, ವಿನಯ್ ಕುಮಾರ್ ಸೇರಿದಂತೆ
ಕನ್ನಡಪ್ರಭ ಓದುಗರ ಬಳಗದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
*****

Leave a Reply

Your email address will not be published. Required fields are marked *