ಗುಣಮಟ್ಟದ ಶಿಕ್ಷಣ ಸೇವೆಗೆ ರಾಜ್ಯಮಟ್ಟದ ಗೌರವ: ಆರೋಗ್ಯ ಸಚಿವರಿಂದ ಬಳ್ಳಾರಿಯ ಯಶೋಧ, ಅಜಯ್ ಕುಮಾರ್‌ಗೆ ಪ್ರಶಸ್ತಿ ಪ್ರದಾನ

ಬಳ್ಳಾರಿ: ರಾಜ್ಯ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ರಾಷ್ಟ್ರೀಯ ಶಿಕ್ಷಣ ದಿನಾಚರಣೆ–2026ರ ಅಂಗವಾಗಿ  ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ  ನಗರದ ಶಿಕ್ಷಕಿ ಯಶೋಧ ಹಾಗೂ ಉಪನ್ಯಾಸಕ ಅಜಯ್ ಕುಮಾರ್ ಅವರನ್ನು   ಆರೋಗ್ಯ  ಸಚಿವ ಯು.ಟಿ. ಖಾದರ್ ಅವರು ಸನ್ಮಾನಿಸಿ ಗೌರವಿಸಿದರು.

ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಗರದ ಅಲ್ಲೀಪುರದ ಹತ್ತಿರ ಇರುವ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಯ ಗಣಕಯಂತ್ರ ಶಿಕ್ಷಕಿ ಶ್ರೀಮತಿ ಯಶೋದಾ ಅವರು ಅತ್ಯುತ್ತಮ ಶಿಕ್ಷಕಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.                                                 ಇದೇ ಆವರಣದಲ್ಲಿರುವ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ಬಾಲಕಿಯರ ಪದವಿಪೂರ್ವ ವಸತಿ ಕಾಲೇಜಿನ ಗಣಿತ ಉಪನ್ಯಾಸಕ ಅಜಯ್ ಕುಮಾರ್ ಅವರು ಅತ್ಯುತ್ತಮ ಉಪನ್ಯಾಸಕ ಎಂಬ ಗೌರವಕ್ಕೆ ಭಾಜನರಾಗಿದ್ದಾರೆ.

ಇಬ್ಬರೂ ತಮ್ಮ ತಮ್ಮ ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ ಇಲಾಖೆಯ ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.

ರಾಷ್ಟ್ರೀಯ ಶಿಕ್ಷಣ ದಿನಾಚರಣೆಯ ಅಂಗವಾಗಿ ನಡೆದ ರಾಜ್ಯಮಟ್ಟದ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ರಾಜ್ಯ ಆರೋಗ್ಯ ಸಚಿವ ಯು. ಟಿ. ಖಾದರ್ ಅವರು ಇಬ್ಬರಿಗೂ ಪ್ರಶಸ್ತಿ ಹಾಗೂ ಗೌರವ ಪತ್ರಗಳನ್ನು ನೀಡಿ ಗೌರವಿಸಿದರು.

ಸಾಧಕ ಶಿಕ್ಷಕರ  ಮಹತ್ವದ ಸಾಧನೆಗೆ ಇಲಾಖೆಯ ಜಿಲ್ಲಾ ಅಧಿಕಾರಿ ರಾಜು, ಪ್ರಾಂಶುಪಾಲರಾದ ಮೂಕಪ್ಪ ಕೆ.ಎಂ. ಹಾಗೂ ನಾಗಯ್ಯ ಅವರು ಅಭಿನಂದನೆ ಸಲ್ಲಿಸಿದ್ದಾರೆ.  ಇಲಾಖೆಯ ಸಹೋದ್ಯೋಗಿಗಳು ಹಾಗೂ ಸಿಬ್ಬಂದಿಗಳು ಇಬ್ಬರ ಸಾಧನೆಗೆ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

ಬಳ್ಳಾರಿ ಜಿಲ್ಲೆಗೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಹೆಮ್ಮೆ ತಂದಿರುವ ಇವರ ಸಾಧನೆ ಇತರ ಶಿಕ್ಷಕರು ಹಾಗೂ ಉಪನ್ಯಾಸಕರಿಗೂ ಸ್ಫೂರ್ತಿಯಾಗಲಿ ಎಂಬ ಆಶಯ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *