
ಬಳ್ಳಾರಿ,ನ.15: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ 2024-25ನೇ ಸಾಲಿನ 14ನೇ ವಾರ್ಷಿಕ ಘಟಿಕೋತ್ಸವ ಸಮಾರಂಭವು ನ. 16 ರಂದು ಬೆಳಿಗ್ಗೆ 11.30 ಗಂಟೆಗೆ ವಿಶ್ವವಿದ್ಯಾಲಯದ ಬಯಲು ರಂಗಮಂದಿರದ ಆವರಣದಲ್ಲಿ ಜರುಗಲಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ. ಮುನಿರಾಜು ಅವರು ಹೇಳಿದರು.
ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ 14ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಪ್ರದಾನ ಮಾಡಲಿರುವ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್ ಗಳ ವಿವಿಧ ಪದವಿಗಳು, ರ್ಯಾಂಕ್ ಗಳು ಮತ್ತು ಚಿನ್ನದ ಪದಕಗಳನ್ನು ನೀಡುವ ಕುರಿತು ವಿಶ್ವವಿದ್ಯಾಲಯದ ಸಿದ್ದು ಪಿ.ಅಲಗೂರ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯದ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಮತ್ತು ಒಡಿಶಾ ಉಚ್ಚ ನ್ಯಾಯಾಲಯಗಳ ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ಡಾ. ಕೃಷ್ಣ ಎಸ್. ದೀಕ್ಷಿತ್ ಅವರು ಘಟಿಕೋತ್ಸವದ ಮುಖ್ಯ ಭಾಷಣ ಮಾಡಲಿದ್ದಾರೆ. ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಸಚಿವರು ಹಾಗೂ ವಿಶ್ವವಿದ್ಯಾಲಯದ ಉಪ-ಕುಲಾಧಿಪತಿಗಳಾದ ಬಸವರಾಜ ರಾಯರಡ್ಡಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ. ಮುನಿರಾಜು ಅವರು ಘಟಿಕೋತ್ಸವದ ನೇತೃತ್ವ ವಹಿಸಲಿದ್ದು, ಕುಲಸಚಿವ ಪ್ರೊ. ವಿ. ಲೋಕೇಶ್ ಹಾಗೂ ಮೌಲ್ಯಮಾಪನ ಕುಲಸಚಿವ ಪ್ರೊ. ಪಿ. ಕಣ್ಣನ್ ಸೇರಿದಂತೆ ವಿವಿಯ ಎಲ್ಲಾ ನಿಕಾಯಗಳ ಡೀನರು, ಮುಖ್ಯಸ್ಥರು, ವಿವಿಧ ಮಹಾವಿದ್ಯಾಲಯದ ಪ್ರಾಂಶುಪಾಲರು, ಬೋಧಕ- ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.
ಈ ಬಾರಿಯ ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಧಕರಾದ ಲೋಹಿಯಾ ಸಿ. ಚನ್ನಬಸವಣ್ಣ, ಡಾ. ಹೆನ್ರಿ ಡಿಸೋಜಾ ಮತ್ತು ಗೀತಾ ನಾಗಪಾಲ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಲಿದೆ ಎಂದು ಪ್ರಕಟಿಸಿದರು.
ಘಟಿಕೋತ್ಸವದ ವಿಶೇಷತೆ:ಚಿನ್ನದ ಪದಕಗಳು: ಸ್ನಾತಕ ಮತ್ತು ಸ್ನಾತಕೋತ್ತರ ವಿವಿಧ ವಿಭಾಗಗಳ 42 ವಿದ್ಯಾರ್ಥಿಗಳು ಒಟ್ಟು 50 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಳ್ಳಲಿದ್ದಾರೆ.ಪಿಎಚ್ಡಿ: ವಿವಿಧ ವಿಭಾಗಗಳ ಒಟ್ಟು 52 ಸಂಶೋಧನಾರ್ಥಿಗಳು ಡಾಕ್ಟರೇಟ್ ಪದವಿ ಪಡೆಯಲಿದ್ದಾರೆ. ಅದೇರೀತಿಯಾಗಿ ಎಲ್ಲಾ ವಿಭಾಗಗಳ ಸ್ನಾತಕ ಪದವಿಯ 66 ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವಿಯಿಂದ 71 ವಿದ್ಯಾರ್ಥಿಗಳು ಸೇರಿ ಒಟ್ಟು 137 ವಿದ್ಯಾರ್ಥಿಗಳು ರ್ಯಾಂಕ್ ಪ್ರಮಾಣ ಪತ್ರಗಳನ್ನು ಪಡೆಯಲಿದ್ದಾರೆ ಎಂದರು.ವಿವಿಧ ಪದವಿಗಳಲ್ಲಿ ಚಿನ್ನದ ಪದಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳ ಪಟ್ಟಿ:ಸ್ನಾತಕೋತ್ತರ ಪದವಿ ವಿಭಾಗ:4 ಚಿನ್ನದ ಪದಕಗಳನ್ನು ಪಡೆದವರು: ಸವಿತಾ (ವಾಣಿಜ್ಯಶಾಸ್ತ್ರ ವಿಭಾಗ) – ಶ್ರೀ ಗುರು ತಿಪ್ಪೇರುದ್ರ ಕಾಲೇಜು, ಬಳ್ಳಾರಿ.3 ಚಿನ್ನದ ಪದಕಗಳನ್ನು ಪಡೆದವರು: ತಸ್ಮಿಯಾಬಾನು ಆರ್ (ಔದ್ಯೋಗಿಕ ರಸಾಯನಶಾಸ್ತ್ರ) – ವಿಶ್ರೀಕೃವಿವಿ ಮುಖ್ಯ ಆವರಣ, ಬಳ್ಳಾರಿ.2 ಚಿನ್ನದ ಪದಕಗಳನ್ನು ಪಡೆದ ವಿದ್ಯಾರ್ಥಿಗಳು:ಉಜ್ಜನಿ ಈಶ್ವರ (ಭೌತಶಾಸ್ತ್ರ) – ವಿಶ್ರೀಕೃವಿವಿ ಮುಖ್ಯ ಆವರಣ, ಬಳ್ಳಾರಿ.ಸಮ್ರೀನ್ (ರಸಾಯನಶಾಸ್ತ್ರ) – ವಿಶ್ರೀಕೃವಿವಿ ಮುಖ್ಯ ಆವರಣ, ಬಳ್ಳಾರಿ.ಪದ್ಮಾವತಿ ಕೆ (ಸಮಾಜಕಾರ್ಯ) – ವಿಶ್ರೀಕೃವಿವಿ ಮುಖ್ಯ ಆವರಣ, ಬಳ್ಳಾರಿ.ಮಹಾಲಿಂಗಪ್ಪ ತಂಬ್ರಹಳ್ಳಿ (ಇತಿಹಾಸ ಮತ್ತು ಪುರಾತತ್ವ) – ಸ್ನಾತಕೋತ್ತರ ಕೇಂದ್ರ, ನಂದಿಹಳ್ಳಿ.ಸ್ನಾತಕ ಪದವಿ ವಿಭಾಗ:ಪೂಜಾ (ಬಿ.ಕಾಮ್) – ಬಿಬಿಸಿ ಕಾಲೇಜು, ಬಳ್ಳಾರಿ.ಅಜಯ್ (ಬಿ.ಎಸ್ಸಿ)- ಜಿವಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಗರಿಬೊಮ್ಮನಹಳ್ಳಿ.ಬಸಮ್ಮ (ಬಿ.ಎ.) – ಜ್ಞಾನ ಭಾರತಿ ಡಿಗ್ರಿ ಕಾಲೇಜು, ಬಳ್ಳಾರಿ.ಬಿ ಕಾವ್ಯ (ಬಿ.ಎಸ್.ಡಬ್ಲ್ಯು) – ಗಂಗೋತ್ರಿ ಪದವಿ ಕಾಲೇಜು, ಕೊಟ್ಟೂರು.ಉತ್ತೀರ್ಣತೆ ಮತ್ತು ಫಲಿತಾಂಶ:ವಿಶ್ವವಿದ್ಯಾಲಯವು ಈ ಬಾರಿ ಒಟ್ಟಾರೆಯಾಗಿ ಶೇ. 95.33 ರಷ್ಟು ಉತ್ತಮ ಫಲಿತಾಂಶ ದಾಖಲಿಸಿದೆ.
ಸ್ನಾತಕ ಪದವಿಯಲ್ಲಿ 13,346 ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ಮತ್ತು ಡಿಪ್ಲೋಮಾ ವಿಭಾಗದಲ್ಲಿ 1,448 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಪಿ. ಕಣ್ಣನ್ (ಮೌಲ್ಯಮಾಪನ), ಪ್ರೊ. ಲೋಕೇಶ ವಿ. (ಪ್ರಭಾರ) ಇದ್ದರು.
ಗೌರವ ಡಾಕ್ಟರೇಟ್ ಪುರಸ್ಕೃತರ ಪರಿಚಯ:

ಡಾ. ಹೆನ್ರಿ ಡಿಸೋಜಾ (ಶಿಕ್ಷಣ ಮತ್ತು ಸಮಾಜಸೇವೆ):ದಕ್ಷಿಣ ಕನ್ನಡದ ಕಿನ್ನಿಗೋಳಿಯಲ್ಲಿ 1949ರಲ್ಲಿ ಜನಿಸಿದ ಡಾ. ಹೆನ್ರಿ ಡಿಸೋಜಾ ಅವರು ಕ್ರೈಸ್ತ ಧರ್ಮಗುರುವಾಗಿ ಸೇವೆ ಆರಂಭಿಸಿ, ಯುವಕರ ಪ್ರೋತ್ಸಾಹಕ್ಕಾಗಿ ಶ್ರಮಿಸಿದ್ದಾರೆ. ಮಂಗಳೂರಿನ ಸಂದೇಶ ಪ್ರತಿಷ್ಠಾನದ ಸಂಸ್ಥಾಪಕರಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. 2008ರಲ್ಲಿ ಬಳ್ಳಾರಿ ಧರ್ಮಪ್ರಾಂತ್ಯದ ನಾಲ್ಕನೇ ಬಿಷಪ್ ಆಗಿ ನೇಮಕಗೊಂಡು, ಶಿಕ್ಷಣ, ಆರೋಗ್ಯ ಹಾಗೂ ಸಮಾಜಸೇವೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.ಬಳ್ಳಾರಿಯಲ್ಲಿ ವಿಶೇಷ ಚೇತನ ಮಕ್ಕಳ ಶಾಲೆ, ಎಚ್ಐವಿ ಪೀಡಿತ ಮಕ್ಕಳ ಪುನರ್ವಸತಿ ಕೇಂದ್ರ, ಬಡ ವಿದ್ಯಾರ್ಥಿನಿಯರ ವಸತಿನಿಲಯ ಮತ್ತು ವೃದ್ಧಾಶ್ರಮವನ್ನು ಸ್ಥಾಪಿಸಿದ್ದಾರೆ. ಬಳ್ಳಾರಿ ಕೇಂದ್ರ ಕಾರಾಗೃಹದ ಕೈದಿಗಳಿಗೆ ಉಚಿತ ಆರೋಗ್ಯ ಶಿಬಿರಗಳು, ದೇವದಾಸಿಯರು ಮತ್ತು ತೃತೀಯ ಲಿಂಗಿಗಳಿಗೆ ವಿಶೇಷ ಆರೋಗ್ಯ ಸೇವೆಯನ್ನು ಒದಗಿಸಿದ್ದಾರೆ. 2018ರಲ್ಲಿ ರೋಮ್ ನಲ್ಲಿ ಭಾರತವನ್ನು ಪ್ರತಿನಿಧಿಸಿರುವ ಇವರು, 2000ರ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿ ಹಾಗೂ 2017ರ ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಚನ್ನಬಸವಣ್ಣ ಸಿ. (ಸಾಹಿತ್ಯ, ಪರಿಸರ ಹಾಗೂ ಸಮಾಜಸೇವೆ):ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದಲ್ಲಿ 1949ರಲ್ಲಿ ಜನಿಸಿದ ಇವರು ‘ಲೋಹಿಯಾ ಚನ್ನಬಸವಣ್ಣ’ ಎಂದೇ ಪ್ರಸಿದ್ಧರಾಗಿದ್ದಾರೆ. ಬಳ್ಳಾರಿಯಲ್ಲಿ ಲೋಹಿಯಾ ಪ್ರಕಾಶನ ಸ್ಥಾಪಿಸಿ, ಸುಮಾರು 100 ಕನ್ನಡ ಪುಸ್ತಕಗಳನ್ನು ಪ್ರಕಟಿಸಿದ್ದು, ಇವರ ಪ್ರಕಾಶನದ ಹಲವು ಕೃತಿಗಳು ಕೇಂದ್ರ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಪಡೆದಿವೆ.1980ರ ಗೋಕಾಕ ಚಳವಳಿ, ಜಾತಿ ವಿನಾಶ ಹೋರಾಟ, ಬಂಡಾಯ ಸಾಹಿತ್ಯ ಚಳವಳಿ ಹಾಗೂ ಪರಿಸರ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 2026ರ ಡಾ. ಗುರುಲಿಂಗ ಕಾಪಸೆ ಸಾಹಿತ್ಯ ಪ್ರಶಸ್ತಿಗೆ ಭಾಜನರಾದ ಇವರು, ಕನ್ನಡಪರ ಹೋರಾಟ, ಸಮಾಜಸೇವೆ ಮತ್ತು ಪ್ರಕಾಶನ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ್ದಾರೆ.

ಗೀತಾ ನಾಗಪಾಲ್ (ಶಿಕ್ಷಣ, ಕಲೆ ಹಾಗೂ ಸಮಾಜಸೇವೆ):1959ರ ಆಗಸ್ಟ್ 27ರಂದು ಬೆಂಗಳೂರಿನಲ್ಲಿ ಜನಿಸಿದ ಗೀತಾ ನಾಗಪಾಲ್ ಅವರು, 1985ರಲ್ಲಿ ಸ್ಥಾಪನೆಯಾದ ಕೃಪಾನಿಧಿ ಶಿಕ್ಷಣ ಸಂಸ್ಥೆಗಳ ಸಮೂಹದ ಸಹಸಂಸ್ಥಾಪಕರು ಹಾಗೂ ಉಪಾಧ್ಯಕ್ಷರಾಗಿದ್ದಾರೆ. ನಾಲ್ಕು ದಶಕಗಳಲ್ಲಿ ಶಿಕ್ಷಣ ಸಂಸ್ಥೆಯನ್ನು ಬೆಳೆಸಿ, ಕಂಪ್ಯೂಟರ್ ವಿಜ್ಞಾನ, ಫಿಸಿಯೋಥೆರಪಿ, ಶುಶ್ರೂಷೆ ಮತ್ತು ನಿರ್ವಹಣಾ ಶಾಸ್ತç ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸುಮಾರು 6,000 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದಾರೆ.ಜೀವವೈವಿಧ್ಯ ಮತ್ತು ಪರಿಸರ ಸಂರಕ್ಷಣೆಯೊಂದಿಗೆ ಮಹಿಳಾ ಶಿಕ್ಷಣ, ಆತ್ಮವಿಶ್ವಾಸ ಹಾಗೂ ನಾಯಕತ್ವದ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಚಲನಚಿತ್ರ ನಟಿ ಹಾಗೂ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿರುವ ಇವರು, ಸಮಗ್ರ ಕಲಿಕೆ ಮತ್ತು ನಾವೀನ್ಯತೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇವರಿಗೆ ‘ನಾ ಕನ್ನಡಿಗ ಪ್ರಶಸ್ತಿ’ (2025), ‘ನಾರಿ ನಾರಾಯಣಿ ಪ್ರಶಸ್ತಿ’ (2026) ಹಾಗೂ ‘ಮಹಿಳಾ ಮಾಣಿಕ್ಯ ಪ್ರಶಸ್ತಿ’ ಸೇರಿದಂತೆ ಹಲವು ಗೌರವಗಳು ಲಭಿಸಿವೆ. —–
