
ಬಳ್ಳಾರಿ,ನ.13: ಭಾರತದ ಇತಿಹಾಸದಲ್ಲಿ ಮಹಿಳೆಯರ ಹಕ್ಕುಗಳು ಮತ್ತು ಸಬಲೀಕರಣದ ಕುರಿತು ಮೊಟ್ಟಮೊದಲ ಬಾರಿಗೆ ಗಟ್ಟಿ ಧ್ವನಿ ಎತ್ತಿದವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಎಂದು ನಗರದ ಕಂಬಳಿ ಬಜಾರ್ ನ ಸರ್ಕಾರಿ ಪ್ರೌಢಶಾಲೆಯ ಕನ್ನಡ ಅಧ್ಯಾಪಕರಾದ ವಸುಧ ಧಾರವಾರ್ ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ರವರ ಬದುಕು ಮತ್ತು ಸಾಧನೆಗಳ ಪರಿಚಯಕ್ಕಾಗಿ ನಗರದ ರೇಡಿಯೋ ಪಾರ್ಕ್ ನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಅಂಬೇಡ್ಕರ್ ಓದು’ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ ಅವರು ಮಾತನಾಡಿದರು.
ಸಮಾಜವೊಂದರ ಪ್ರಗತಿಯನ್ನು ಆ ಸಮಾಜದಲ್ಲಿ ಮಹಿಳೆಯರು ಎಷ್ಟರಮಟ್ಟಿಗೆ ಪ್ರಗತಿ ಸಾಧಿಸಿದ್ದಾರೆ ಎಂಬುದರ ಮೇಲೆ ಅಳೆಯಬೇಕು ಎಂಬ ಅಂಬೇಡ್ಕರ್ ಅವರ ಮಾತು ಇಂದಿಗೂ ಅತ್ಯಂತ ಪ್ರಸ್ತುತವಾಗಿದೆ. ಮಹಿಳಾ ಪರ ನಿಲುವಿಗಾಗಿ ತಮ್ಮ ಸಚಿವ ಸ್ಥಾನವನ್ನೇ ತ್ಯಾಗ ಮಾಡಿದ ಮಹಾನ್ ನಾಯಕ ಅಂಬೇಡ್ಕರ್ ಎಂದು ಅವರು ವಿವರಿಸಿದರು.

ಇಂದಿನ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಮುನ್ನಡೆಯುತ್ತಿರುವುದರ ಹಿಂದೆ ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನದ ಆಶಯಗಳಿವೆ. ಪ್ರತಿಯೊಬ್ಬ ಮಹಿಳೆಯೂ ಅವರ ವಿಚಾರಧಾರೆಗಳನ್ನು ಅರಿತು, ಸ್ವಾವಲಂಬಿಗಳಾಗಿ ಬದುಕುವ ಮೂಲಕ ಅವರಿಗೆ ನಿಜವಾದ ಗೌರವ ಸಲ್ಲಿಸಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಜ್ಞಾ ಕೆ.ವಿ. ಅವರು ಮಾತನಾಡಿ, ವಿಶ್ವದ ನೂರಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗೆ ಒಳಗಾಗಿರುವ ಏಕೈಕ ವ್ಯಕ್ತಿ ಡಾ. ಅಂಬೇಡ್ಕರ್. ಉತ್ತಮ ಶಿಕ್ಷಣ, ಸಮರ್ಥ ಸಂಘಟನೆ ಹಾಗೂ ಅನ್ಯಾಯದ ವಿರುದ್ಧ ಹೋರಾಡುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ತೊಗಲುಗೊಂಬೆ ಕಲಾವಿದೆ ಹುಲಿಗೆಮ್ಮ ಅವರು ಮಾತನಾಡಿ, ತಂದೆಯ ಕಾಲದಿಂದಲೂ ಪರದೆ ಹಿಂದೆ ತೊಗಲುಗೊಂಬೆಯಾಡಿಸುತ್ತಾ ಬೆಳೆದ ತಮಗೆ ಅಕ್ಷರದ ಜ್ಞಾನವಿಲ್ಲ ಎಂದರು. ಬಳಿಕ ಕಂಠಪಾಠ ಮಾಡಿದ್ದ ಹಾಡುಗಳ ಮೂಲಕ ತಮ್ಮ ಕಲೆಯ ಪರಿಚಯ ಮಾಡಿಕೊಟ್ಟರು.
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಪುಸ್ತಕ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಕೆ. ಮಲ್ಲಿಕಾರ್ಜುನ ಹಾಗೂ ಕನ್ನಡದ ವಿಭಾಗದ ಮುಖ್ಯಸ್ಥ ಡಾ. ಸಿ. ಕೊಟ್ರಪ್ಪ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
—-.
