ಸರಳತೆ, ನಿರ್ಮಲ ನಗುಮೊಗದಿಂದ ಬಳ್ಳಾರಿಗರ ಮನಗೆದ್ದ ‘ಗವರ್ನರ್’ ಡಾ. ಸುಧಾ ಯಾದವ್!

ಸರಳತೆ, ನಿರ್ಮಲ ನಗುಮೊಗದಿಂದ ಬಳ್ಳಾರಿಗರ ಮನಗೆದ್ದ ರಾಜ್ಯಪಾಲೆ ಡಾ. ಸುಧಾ ಯಾದವ್!

ಎರಡು ದಿನಗಳ ಬಳ್ಳಾರಿ ಪ್ರವಾಸದಲ್ಲಿ ಹುದ್ದೆಯ ಗಾಂಭೀರ್ಯಕ್ಕಿಂತ ಆತ್ಮೀಯತೆಗೆ ಆದ್ಯತೆ; ವಿದ್ಯಾರ್ಥಿಗಳೊಂದಿಗೆ ಅಮ್ಮನ ವಾತ್ಸಲ್ಯದ ಒಡನಾಟ


ಬಳ್ಳಾರಿ, ನ.16: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ಎರಡು ದಿನಗಳ ಪ್ರವಾಸಕ್ಕಾಗಿ ಬಳ್ಳಾರಿಗೆ ಆಗಮಿಸಿರುವ ಕರ್ನಾಟಕದ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರು ತಮ್ಮ ಸರಳ ನಡೆ, ನಿರ್ಮಲ ನಗುಮುಖ ಹಾಗೂ ಆತ್ಮೀಯ ವರ್ತನೆಯ ಮೂಲಕ ಬಳ್ಳಾರಿಗರ ಮನಗೆದ್ದಿದ್ದಾರೆ.

ಭಾನುವಾರ ಸಂಜೆ ನಗರಕ್ಕೆ ಆಗಮಿಸಿದ ರಾಜ್ಯಪಾಲರನ್ನು ಜಿಲ್ಲಾಡಳಿತ ಆತ್ಮೀಯವಾಗಿ ಸ್ವಾಗತಿಸಿತು. ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪನ್ನೇಕರ್, ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್ ಹಾರಿಸ್ ಸುಮೇರ್ ಹಾಗೂ ವಿಎಸ್‌ಕೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮುನಿಸ್ವಾಮಿ ಅವರು ಹೂಗುಚ್ಛ ನೀಡಿ ಸ್ವಾಗತಿಸಿದ ಸಂದರ್ಭದಲ್ಲಿ, ರಾಜ್ಯಪಾಲರು ಎಲ್ಲರೊಂದಿಗೆ ನಗುಮುಖದಿಂದಲೇ ಬೆರೆತು ಯಾವುದೇ ಹಮ್ಮುಬಿಮ್ಮುಗಳಿಲ್ಲದೆ ಆತ್ಮೀಯವಾಗಿ ಅಭಿನಂದನೆ ಸ್ವೀಕರಿಸಿದ್ದು ಗಮನ ಸೆಳೆಯಿತು.

ಸೋಮವಾರ ನಡೆದ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿಯೂ ರಾಜ್ಯಪಾಲರ ಇದೇ ಸರಳತೆ ಮತ್ತು ಲವಲವಿಕೆ ಮುಂದುವರಿಯಿತು. ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಸಮಾರಂಭದಲ್ಲಿ ಅತ್ಯಂತ ಉತ್ಸಾಹದಿಂದ, ಹಸನ್ಮುಖರಾಗಿ ಪಾಲ್ಗೊಂಡ ಅವರು ವಿದ್ಯಾರ್ಥಿಗಳು ಹಾಗೂ ಪೋಷಕರ ಮೆಚ್ಚುಗೆಗೆ ಪಾತ್ರರಾದರು.

ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲರು, ಶಿಷ್ಟಾಚಾರದ ಕಟ್ಟುನಿಟ್ಟಿನ ಚೌಕಟ್ಟಿಗೆ ಸೀಮಿತವಾಗದೆ ವಿದ್ಯಾರ್ಥಿಗಳೊಂದಿಗೆ ಅತ್ಯಂತ ಆತ್ಮೀಯವಾಗಿ ಬೆರೆತದ್ದು ವಿಶೇಷವಾಗಿತ್ತು. ಚಿನ್ನದ ಪದಕ ಹಾಗೂ ರ್ಯಾಂಕ್ ಗಳಿಸಿದ ವಿದ್ಯಾರ್ಥಿನಿಯರಿಗೆ ನಗುಮುಖದಿಂದ ಪ್ರಮಾಣಪತ್ರ ಮತ್ತು ಪದಕಗಳನ್ನು ಪ್ರದಾನ ಮಾಡಿದರು. ಸಾಧಕ ವಿದ್ಯಾರ್ಥಿಗಳ ತಲೆಮುಟ್ಟಿ ಆಶೀರ್ವದಿಸಿ, ಬೆನ್ನುತಟ್ಟಿ ಪ್ರೋತ್ಸಾಹಿಸಿದ ಅವರ ಮಾತೃವಾತ್ಸಲ್ಯದ ನಡೆ ನೆರೆದಿದ್ದ ಪೋಷಕರು ಹಾಗೂ ಪಾಲಕರ ಹೃದಯ ಗೆದ್ದಿತು.

ತುಂಬಿದ ಕೊಡ ತುಳುಕುವುದಿಲ್ಲ ಎಂಬ ಗಾದೆಗೆ ಅನ್ವರ್ಥವೆಂಬಂತೆ, ಐಐಟಿ ಪದವೀಧರೆಯೂ ಆಗಿರುವ, ಪಿಎಚ್.ಡಿ ಪದವಿ ಪಡೆದಿರುವ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರ ಸರಳ ವ್ಯಕ್ತಿತ್ವ, ಹುದ್ದೆಯ ಅಧಿಕಾರದ ಪ್ರದರ್ಶನಕ್ಕಿಂತ ಮಾನವೀಯ ಸಂಬಂಧಗಳಿಗೆ ನೀಡುವ ಮಹತ್ವವನ್ನು ಎತ್ತಿತೋರಿಸಿತು.

ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಬಳ್ಳಾರಿಗೆ ಆಗಮಿಸಿದ್ದ ಅಂದಿನ ರಾಜ್ಯಪಾಲೆ ಶ್ರೀಮತಿ ರಮಾದೇವಿ ಅವರ ಸರಳತೆ ಮತ್ತು ಸಾರ್ವಜನಿಕರೊಂದಿಗೆ ಬೆರೆಯುತ್ತಿದ್ದ ಆತ್ಮೀಯತೆಯನ್ನು ಹಿರಿಯ ಪತ್ರಕರ್ತರು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು. ಇದೀಗ ಡಾ. ಸುಧಾ ಯಾದವ್ ಅವರ ನಡೆ-ನುಡಿಯಲ್ಲಿಯೂ ಅದೇ ಸರಳತೆ ಮತ್ತು ಜನಸ್ನೇಹಿ ಗುಣಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದದ್ದು ವಿಶೇಷವಾಗಿತ್ತು.

ಒಟ್ಟಿನಲ್ಲಿ, ರಾಜ್ಯಪಾಲರ ಎರಡು ದಿನಗಳ ಬಳ್ಳಾರಿ ಪ್ರವಾಸ ಕೇವಲ ಅಧಿಕೃತ ಕಾರ್ಯಕ್ರಮಗಳಿಗೆ ಸೀಮಿತವಾಗದೆ, ಅವರ ಸರಳತೆ, ಸೌಜನ್ಯ, ನಿರ್ಮಲ ನಗು ಹಾಗೂ ವಿದ್ಯಾರ್ಥಿಗಳ ಬಗೆಗಿನ ಕಾಳಜಿಯಿಂದಾಗಿ ಜನಮಾನಸದಲ್ಲಿ ಆತ್ಮೀಯ ನೆನಪಾಗಿ ಉಳಿಯುವಂತಾಯಿತು.

ಸಿ.ಮಂಜುನಾಥ                                   ಸಂಪಾದಕರು                 karnatakakahale.com

Leave a Reply

Your email address will not be published. Required fields are marked *