ಬಳ್ಳಾರಿಯಲ್ಲಿ ಪ್ರತಿಭಟನಾ ಮೆರವಣಿಗೆ: ಬಸವ ಮಂಟಪ ಕೃತಿ ರಚನೆಕಾರ ರವಿ ಹಂಜ್ ನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲು ಎ. ಮಾನಯ್ಯ ಆಗ್ರಹ

ಬಳ್ಳಾರಿ. ನ. 25: ತಲತಲಾಂತರಗಳಿಂದ ಶೋಷಣೆಗೆ ಒಳಪಟ್ಟಂತ ಜನರನ್ನು ಸಮಾಜದಲ್ಲಿ ಮೇಲೆತ್ತಲು ಪ್ರಯತ್ನ ಪಟ್ಟ ವಿಶ್ವಗುರು ಬಸವೇಶ್ವರರನ್ನು ಹೀಯಾಳಿಸಿ ಬಸವ ಮಂಟಪ ಕೃತಿ ರಚಿಸಿದ ರವಿ ಹಂಜ್ ನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎ. ಮಾನಯ್ಯ ಆಗ್ರಹಿಸಿದರು.

ಅವರು ಬುಧವಾರ ನಗರದಲ್ಲಿ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿದರು. 12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪನೆ ಮಾಡಿದ್ದು ಇಂದಿನ ಲೋಕಸಭೆಗೆ ಹೋಲಿಕೆ ಮಾಡಬಹುದು. ‘ಕಾಯಕವೇ ಕೈಲಾಸ’ ಎಂಬ ನುಡಿಯು ಮನುಷ್ಯನ ಅಭಿವೃದ್ಧಿಗೆ ಕೈಗನ್ನಡಿಯಾಗಿದೆ ಎಂದು ಹೇಳಿದರು.
ಕಲ್ಯಾಣದಲ್ಲಿ ಬಸವಣ್ಣನವರ ಕಾರ್ಯ ವೈಖರಿಯನ್ನು ಮೆಚ್ಚಿಕೊಂಡು ಶರಣರಾದ ಮೊಳಗೆ ಮಾರಯ್ಯ, ಮಾದಾರ ಚೆನ್ನಯ್ಯ, ಉರಿಲಿಂಗಪೆದ್ದಿ, ಸಿದ್ದರಾಮ ಶ್ರೀಗಳು, ಅಲ್ಲಮಪ್ರಭು ಹೀಗೆ ಬೇರೆ ದೇಶಗಳಿಂದ ಬಂದಿರುವ ಶರಣರು ಸೇರಿ 770 ಗಣಗಳನ್ನು ಒಳಗೊಂಡು ದಾಸೋದಂತಹ ಕಾರ್ಯಗಳನ್ನು ಮಾಡಿದ್ದು, ಅತ್ಯಂತ ಮಾನವೀಯ ಗುಣಗಳಿಂದ ಕೂಡಿರುತ್ತದೆ ಎಂದುಲರು. ಶರಣರು ತಮ್ಮ ಕಾಯಕದಿಂದ ಬಂದಂತಹ ಹಣದಲ್ಲಿ ತಮ್ಮ ಆ ದಿನದ ಜೀವನಕ್ಕೆ ನಡೆಸಿ ಮಿಕ್ಕ ಹಣವನ್ನು ಬಸವಣ್ಣನವರ ದಾಸೋಹಕ್ಕೆ ನೀಡುತ್ತಿದ್ದರು. ಇಂತಹ ಸಮಾಜ ಸುಧಾರಕರ ಬಗ್ಗೆ ಅವಹೇಳನಕಾರಿಯಾಗಿ ತಮ್ಮ ಬಸವ ಮಂಟಪ ಕೃತಿಯಲ್ಲಿ ಉಲ್ಲೇಖಿಸುವ ರವಿ ಹಂಜ್ ಒಬ್ಬ ಸಮ ಸಮಾಜದ ವಿರೋಧಿಯಾಗಿದ್ದಾರೆ ಎಂದು ಟೀಕಿಸಿದ ಮಾನಯ್ಯ ಅವರು ನಮಗೆ ಇಂಥ ಮನುವಾದಿಗಳ ಕೃತಿಯ ಅವಶ್ಯಕತೆ ಇಲ್ಲ ಇಂತಹ ಸಮಾಜ ವಿದ್ರೋಹಿಯನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಸರಕಾರವನ್ನು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ವಿ. ಎಸ್ ಶಿವಶಂಕರ್, ಆಂಜನೇಯ, ಗಾದಿಲಿಂಗನಗೌಡ, ರಾಮಣ್ಣ, ಕಪ್ಪಗಲ್ಲು ಓಂಕಾರಪ್ಪ, ತಳವಾರ್ ದುರುಗಪ್ಪ, ಬಿ. ರಮೇಶ್, ಟಿ.ಎಂ. ಎರಿಸ್ವಾಮಿ, ಹುಲುಗಪ್ಪ ಬೆಳಗಲ್, ಸಂಗನಕಲ್ಲು ವಿಜಯಕುಮಾರ್, ಮಹೇಶ್, ಮಲ್ಲಪ್ಪ, ದೊಡ್ಡಬಸಪ್ಪ, ಎಚ್. ಶಂಕರ್, ಭೀಮಶಂಕರ್, ಗಾದಿಲಿಂಗ, ಗಂಗಾಧರ, ದುರ್ಗದಾಸ್, ಅರ್ಜುನ್, ಶಿವು ಅಸುಂಡಿ, ಹನುಮಂತಪ್ಪ ಕುಡತಿನಿ, ತಿಪ್ಪೇಸ್ವಾಮಿ, ಕೋಳೂರು ಮಲ್ಲಿ, ಕೃಷ್ಣ, ಉಮೇಶ್, ಸುರೇಂದ್ರ, ಜಾನ್ ಸೇರಿದಂತೆ ವಿವಿಧ ತಾಲೂಕುಗಳ ಪದಾಧಿಕಾರಿಗಳು, ದಲಿತ ಸಮುದಾಯದ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *