
ಬಳ್ಳಾರಿ. ನ. 23 : ತಾಯಿಯೇ ಮೊದಲ ಗುರು ತಂದೆ ತಾಯಿಯೇ ದೇವರುಗಳು ಅವರನ್ನು ಇಳಿ ವಯಸ್ಸಿನಲ್ಲಿ ಚೆನ್ನಾಗಿ ನೋಡಿಕೊಳ್ಳಬೇಕು ಇದರಿಂದ ನಿಮ್ಮ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯನ್ನು ಪಡೆಯಬಹುದು ಎಂದು ಶ್ರೀಮತಿ ಸರಳಾದೇವಿ ಸತೀಶ್ ಚಂದ್ರ ಅಗರ್ವಾಲ್ ಸರಕಾರಿ ಪ್ರಥಮದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಅಬ್ದುಲ್ ಮುತಾಲಿಬ್ ಅವರು ಹಳೆಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅವರು ಸೋಮವಾರ ಕಾಲೇಜಿನ ಸಭಾಂಗಣದಲ್ಲಿ 1996 ಬ್ಯಾಚಿನ ಬಿಕಾಂ ವಿದ್ಯಾರ್ಥಿಗಳ ಗುರುವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ತಂದೆ ತಾಯಿಗಳು ನಿಮ್ಮ ಜೀವನದ ಏಳಿಗೆಗಾಗಿ ತಮ್ಮ ಎಲ್ಲಾ ಕಷ್ಟ ಕಾರ್ಪಣ್ಯಗಳನ್ನು ಬದಿಗಿಟ್ಟು ನಿಮಗೆ ಬೇಕಾದ ಸೌಲಭ್ಯಗಳನ್ನು ಒದಗಿಸಿ ಕೊಟ್ಟು ಉತ್ತಮ ವಿದ್ಯಾವಂತರನ್ನಾಗಿ ಮಾಡಲು ಬಹಳ ಶ್ರಮ ಪಟ್ಟಿರುತ್ತಾರೆ. ಅವರ ಕನಸುಗಳನ್ನು ನನಸು ಮಾಡಲಾಗದಿದ್ದರೂ ಅವರ ಇಳಿ ವಯಸಿನಲ್ಲಿ ವೈದ್ಯಕೀಯ ಸೇರಿದಂತೆ ಇತರ ಅವಶ್ಯಕತೆಗಳನ್ನು ಸಮರ್ಪಕ ರೀತಿಯಲ್ಲಿ ದೊರೆಯುವಂತೆ ನೋಡಿಕೊಂಡು ತಂದೆ ತಾಯಿ ಋಣವನ್ನು ತೀರಿಸಬೇಕು ಎಂದು ತಿಳಿಸಿದರು.
ಗುರುಗಳು ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸಿ ಉತ್ತಮ ಮಾರ್ಗವನ್ನು ತೋರಿಸಬಹುದು, ಕಾಲೇಜುಗಳು ನಿಮ್ಮ ವಿದ್ಯೆಗೆ ತಕ್ಕ ಮಾರ್ಕ್ಸ್ ಕಾರ್ಡ್ ಮತ್ತು ಗ್ರೇಡ್ ಗಳನ್ನು ನೀಡಬಹುದು ಆದರೆ ನಿಮ್ಮ ಪರಿಶ್ರಮವೇ ನಿಮ್ಮ ಜೀವನವನ್ನು ಉತ್ತುಂಗಕ್ಕೆ ವಯ್ಯಬಲ್ಲದು. ಯಾವುದೇ ಅಡ್ಡದಾರಿಗಳನ್ನು ಹಿಡಿಯದೆ ಉತ್ತಮ ಮಾರ್ಗಗಳನ್ನು ಕಂಡುಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಬೇಕೆಂದ ಅವರು, ಮನೆ ಗೆದ್ದು ಮಾರು ಗೆಲ್ಲು ಎನ್ನುವಂತೆ ತಂದೆ ತಾಯಿಗೆ ಉತ್ತಮ ಮಗನಾಗಿ ಪತ್ನಿಗೆ ತಕ್ಕ ಪತಿಯಾಗಿ ಮಕ್ಕಳ ಮೆಚ್ಚುಗೆಯ ತಂದೆಯಾಗಿ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕಿದರೆ ನಿಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮತ್ತೊಬ್ಬ ನಿವೃತ್ತ ಪ್ರಾಂಶುಪಾಲ ನಾರಾಯಣಪ್ಪ ಅವರು ಮಾತನಾಡಿ, ಜೀವನದಲ್ಲಿ ಈಗಾಗಲೇ ಅರ್ಧ ಆಯುಷ್ಯವನ್ನು ಕಳೆದಿದ್ದೀರಿ. ಒಂದು ಪಕ್ಷಿಗೆ ಎರಡು ರೆಕ್ಕೆಗಳಿದ್ದಂತೆ ನಮ್ಮ ಜೀವನ ಒಂದು ರೇಖೆ ಸಾಂಸಾರಿಕ ಜೀವನವನ್ನು ಉತ್ತಮಪಡಿಸಿಕೊಳ್ಳುವುದು ಮತ್ತು ಇನ್ನೊಂದು ರೆಕ್ಕೆ ಧಾರ್ಮಿಕ ಆಚರಣೆಯಿಂದ ಮಾನಸಿಕ ನೆಮ್ಮದಿಯನ್ನು ಪಡೆಯುವುದು ಕಾರಣ ನಿಮ್ಮ ದೈನಂದಿನ ಜೀವನದಲ್ಲಿ ಭಕ್ತಿ ಭಾವವನ್ನು ರೂಡಿಸಿಕೊಂಡು ಮನಶಾಂತಿ ಪಡೆಯಿರಿ ಎಂದು ಹಳೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪ್ರಹ್ಲಾದ್ ಚೌದರಿ ಮಾತನಾಡಿ, ಕಾಲೇಜು ಈಗ ಇಡೀ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ಪ್ರತಿವರ್ಷ ನಾಲ್ಕು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶವನ್ನು ಪಡೆದುಕೊಂಡು ಅಭ್ಯಾಸವನ್ನು ಮಾಡುತ್ತಿದ್ದಾರೆ. ಬಿಎ ಬಿಕಾಂ ಜೊತೆಗೆ ಹಲವು ಹೊಸ ಕೋರ್ಸ್ ಗಳನ್ನು ಆರಂಭಿಸಲಾಗಿದೆ ಇದರಿಂದಾಗಿ ನಮ್ಮ ಕಾಲೇಜಿಗೆ ನ್ಯಾಕ್ ಸಮಿತಿಯಿಂದ ಎ ಗ್ರೇಡ್ ಲಭಿಸಿದೆ ಇದಕ್ಕೆಲ್ಲ ಈ ಹಿಂದಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಕಾರಣ ಎಂದು ಶ್ಲಾಘಿಸಿದರು.
ನಿವೃತ್ತ ಪ್ರಾಂಶುಪಾಲರಾದ ಪ್ರೊ. ಇಂದಿರಾ, ಪ್ರೊ. ಶೈಲಜಾ, ಇಂಗ್ಲಿಷ್ ಪ್ರಾಧ್ಯಾಪಕರಾದ ಪ್ರಕಾಶ್ ಕುಲಕರ್ಣಿ ಸೇರಿದಂತೆ ಇತರರು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಕೇರಳ, ಆಂದ್ರದ ಕರ್ನೂಲ್, ಭದ್ರಾವತಿ ಸೇರಿದಂತೆ ವಿವಿಧ ಕಡೆಯಿಂದ ಆಗಮಿಸಿದ ಸುಮಾರು 30-40 ಹಳೆ ವಿದ್ಯಾರ್ಥಿಗಳು ಭಾಗವಹಿಸಿ ಅವರ ಹಿಂದಿನ ನೆನಪುಗಳನ್ನು ಸ್ಮರಿಸಿಕೊಂಡರು. ಬಾಲಾಜಿ ಆರತಿ ಅಕ್ಬರ್ ರಿಯಾಜ್ ಸೇರಿದಂತೆ ಇನ್ನೂ ಕೆಲ ಹಳೆ ವಿದ್ಯಾರ್ಥಿಗಳು ಹಲವು ದಿನಗಳಿಂದ ಎಲ್ಲರನ್ನೂ ಸೇರಿಸಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಿದರು.
