ಕವಿ, ವಿಮರ್ಶಕ, ಸಂಶೋಧಕರಾಗಿ ಗುರುತಿಸಿಕೊಂಡಿರುವ ಡಾ. ಸದಾಶಿವ ದೊಡಮನಿ ಅವರು, ಇಳಕಲ್ಲಿನ ಅನುದಾನಿತ ಪದವಿ ಕಾಲೇಜಿನ
ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರು.
‘ಧರೆ ಹತ್ತಿ ಉರಿದೊಡೆ’ (ಸಂಯುಕ್ತ ಕವನ ಸಂಕಲನ), ನೆರಳಿಗೂ ಮೈಲಿಗೆ (ಕವನ ಸಂಕಲನ), ‘ಪ್ರತಿಸ್ಪಂದನ’ (ವಿಮರ್ಶೆ), ‘ಧಾರವಾಡ ಮತ್ತು ಹಲಸಂಗಿ ಗೆಳೆಯರ ಗುಂಪು:ಒಂದು ಸಾಂಸ್ಕೃತಿಕ ಅಧ್ಯಯನ’ (ಸಂಶೋಧನಾ ಮಹಾಪ್ರಬಂಧ) ದಂತಹ ಮೌಲಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
ಅಲ್ಲದೆ ಅವರ ‘ಇರುವುದು ಒಂದೇ ರೊಟ್ಟಿ’ ಪ್ರಕಟನೆ ಹಂತದಲ್ಲಿದೆ.
ಆಕಾಶವಾಣಿ, ಧಾರವಾಡ ಕೇಂದ್ರದಿಂದ ಹಲವು ಬಾರಿ ಸ್ವರಚಿತ ಕವಿತೆ, ಭಾಷಣ ಪ್ರಸಾರ. ನಾಡಿನ ಹಲವು ಪತ್ರಿಕೆಗಳಲ್ಲಿ ಕವಿತೆ, ಲೇಖನ ಪ್ರಕಟ. ಲಕ್ಕುಂಡಿ ಉತ್ಸವ, ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ, ಕನ್ನಡ ಸಾಹಿತ್ಯ ಪರಿಷತ್, ಬೆಳಗಾವಿ ವಿಭಾಗ ಮಟ್ಟದ ಕವಿಗೋಷ್ಠಿ ಹೀಗೆ ಹಲವು ಕವಿಗೋಷ್ಠಿಗಳಲ್ಲಿ ಕವಿತೆ ವಾಚನ, ರಾಜ್ಯ, ರಾಷ್ಟ್ರ ಮಟ್ಟದ ವಿಚಾರ ಸಂಕೀರ್ಣಗಳಲ್ಲಿ ಪ್ರಬಂಧ ಮಂಡನೆ. ಕ್ರೈಸ್ಟ್ ಕಾಲೇಜು ಬಹುಮಾನ, ನಾಗರಿಕ ದೀಪಾವಳಿ ವಿಶೇಷಾಂಕ ಬಹುಮಾನ ಇತ್ಯಾದಿ…
ಇಂದಿನ ‘ಅನುದಿನ ಕವನ’ ದ ಗೌರವಕ್ಕೆ ಡಾ. ಸದಾಶಿವ ದೊಡ್ಡಮನಿ ಅವರ ‘ಅವ್ವನ ಕವಿತೆ’ಗಳು ಪಾತ್ರವಾಗಿವೆ.
*****
#ಅವ್ವ-ಕವಿತೆಗಳು#
೧
ಅವ್ವ,
ತನ್ನದೇ ನೋವುಗಳನು
ಹಾಡಿ, ಹಾಡಿ ಬೀಸಿದಳು
ಕಾಳು ಮುಗಿದವು
ನೋವು ಉಳಿದವು!
೨
ಅವ್ವ,
ರೊಟ್ಟಿ ಸುಡುವ ಹಾಗೆ
ತನ್ನನ್ನೂ ಸುಟ್ಟುಕೊಂಡಳು
ಬದುಕನ್ನು ಹೂವಾಗಿಸಿದಳು
೩
ಅವ್ವ,
ರೊಟ್ಟಿಯನು
ಕಣ್ಣೀರಿನಲ್ಲಿ ಸುಟ್ಟಳು
ಸೌದೆಯ ಎದೆಯಲಿ
ದುಃಖ ನದಿಯಾಗಿ ಹರಿಯಿತು
೪
ಪ್ರೀತಿಗೆ
‘ಅವ್ವ’ ಎಂದು ಹೆಸರಿಟ್ಟೆ
ಜಗವೇ ತಾಯಿಯಾಯಿತು
೫
ಸುಡುವ ಬೆಂಕಿಯನು
ತಟ್ಟಿದ ಅವ್ವ
ಹಸಿವನ್ನೇ ಉಂಡಳು
ನಲಿವನ್ನೇ ಇತ್ತಳು
೬
ಅವ್ವ,
ಅತ್ತು, ಅತ್ತು ಹಗುರಾಗುತ್ತಾಳೆ
ನಾನು
ಬರೆದು ಬರೆದು ಹಗುರಾಗುತ್ತೇನೆ
೭
ಚಂದ್ರನನು
ಅವ್ವ ರೊಟ್ಟಿ ಎಂದಳು
ಅಪ್ಪ ಕನಸು ಎಂದನು
ನಾನು ಕವಿತೆ ಎಂದೆನು
ಮಗಳು ಮುತ್ಯಾ ಎಂದಳು
೮
ಅವ್ವ,
ಈ ಬೆಂಕಿಯನು
ಒಡಲಲ್ಲಿ ಇಟ್ಟುಕೊಂಡು
ರೊಟ್ಟಿ ಸುಟ್ಟಳು
ನಾನು ಕವಿತೆ ಬರೆದೆ
೯
ಇದು ಕವಿತೆ
ಅವ್ವ ಮಾಡಿದ ರೊಟ್ಟಿ ಥರ
ಆಸ್ವಾದಿಸಿದಷ್ಟೂ ಸ್ವಾದ
೧೦
ಉರಿವ ಸೂರ್ಯ
ಉರಿಯುತ್ತಲೇ ಇದ್ದ
ಅವ್ವನ ಒಡಲಾಳದ ನೋವು
ರೊಟ್ಟಿಯಾಯಿತು
-ಡಾ. ಸದಾಶಿವ ದೊಡಮನಿ
ಕನ್ನಡ ಸಹಾಯಕ ಪ್ರಾಧ್ಯಾಪಕರು
ಇಲಕಲ್ಲ-587125
ಜಿ-ಬಾಗಲಕೋಟ
ಮೊ:9481931970
*****
