ಅನುದಿನ ಕವನ-೧೦೫, ಕವಿ:ಡಾ. ಬಿ ಆರ್ ಕೃಷ್ಣಕುಮಾರ್, ಚಾಮರಾಜನಗರ, ಕವನದ ಶೀರ್ಷಿಕೆ: ಭೀಮನೆಂಬ ಜ್ಞಾನದ ಮಹಾಬೆಳಕು

ಕವಿ ಪರಿಚಯ:
ಡಾ.ಬಿ.ಆರ್.ಕೃಷ್ಣಕುಮಾರ್ ಅವರು ಮೂಲತ: ಚಾಮರಾಜನಗರ ತಾಲ್ಲೂಕಿನ ಬಿಸಲವಾಡಿ ಗ್ರಾಮದವರು. ಇವರ ತಂದೆ ಸರ್ಕಾರಿ ಶಾಲಾ ಶಿಕ್ಷಕರಾಗಿದ್ದ ದಿವಂಗತ ಬಿ.ಆರ್.ರಂಗಸ್ವಾಮಿರವರು, ತಾಯಿ ನಾಗಮ್ಮ, ಇವರ ಆರಂಭದ ವಿದ್ಯಾಭ್ಯಾಸ ಬಿಸಲವಾಡಿ ಹಾಗೂ ಚಾಮರಾಜನಗರದಲ್ಲಿ ನಡೆಯಿತು. ಇವರ ಕಾವ್ಯಾಸಕ್ತಿಗೆ ಮೈಸೂರಿನ ಮಹಾರಾಜ ಕಾಲೇಜಿನ ಪದವಿ ವ್ಯಾಸಂಗ ವೇದಿಕೆಯಾಯಿತು. ಮುಂದೆ ಸ್ನಾತಕೋತ್ತರ ತರಗತಿಯಲ್ಲಿರುವಾಗ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಹುದ್ದೆಗೆ ಸೇರಿದರು. ನಂತರ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಿಂದ ಎಂ.ಎ ಕನ್ನಡ ಪದವಿಯನ್ನು ಪಡೆದು, ಯುಜಿಸಿಯ ನೆಟ್-ಜೆ.ಆರ್.ಎಫ್‌ನಲ್ಲಿ ತೇರ್ಗಡೆ ಹೊಂದಿದರು. ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ.ಕೆ.ಎನ್.ಗಂಗಾನಾಯಕ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡು, ಕನ್ನಡ ಖಂಡಕಾವ್ಯಗಳನ್ನು ಕುರಿತು ವಿಸ್ತ್ರತ ಅಧ್ಯಯನ ನಡೆಸಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ.
ಪದವಿಯ ವ್ಯಾಸಂಗದ ಕಾಲದಿಂದಲೂ ಹಲವು ಸಮ್ಮೇಳನ ಹಾಗೂ ಸಾಹಿತ್ಯ ಗೋಷ್ಠಿಗಳಲ್ಲಿ ಕವನ ವಾಚನ ಹಾಗೂ ಪ್ರಬಂಧವನ್ನು ಮಂಡನೆ ಮಾಡಿದ್ದಾರೆ. ನಾಡಿನ ದಿನಪತ್ರಿಕೆ, ವಾರ ಪತ್ರಿಕೆ ಹಾಗೂ ಸಾಹಿತ್ಯಕ ಪತ್ರಿಕೆಗಳಲ್ಲಿ ಇವರ ಕವನ, ಕಥೆ, ವಿಮರ್ಶೆ ಹಾಗೂ ಸಂಶೋಧನ ಲೇಖನಗಳು ಪ್ರಕಟಗೊಂಡಿವೆ.

ಇಂದಿನ ‘ಅನುದಿನ ಕವನ’ ಕ್ಕೆ ವಿಶ್ವಜ್ಞಾನಿ, ಭಾರತರತ್ನ ಡಾ. ಬಿ ಆರ್ ಅಂಬೇಡ್ಕರ್ ಇವರ ಕುರಿತು ಬರೆದ ‘ಭೀಮನೆಂಬ ಜ್ಞಾನದ ಮಹಾಬೆಳಕು’ ಕವಿತೆ ಪಾತ್ರವಾಗಿದೆ.👇

‘ಭೀಮನೆಂಬ ಜ್ಞಾನದ ಮಹಾಬೆಳಕು’

ನಿಮ್ಮ ಹೆಸರೆಂಬ ಉಸಿರಿನಲಿ
ಬಹುಜನರ ಉಸಿರಾಟ ಭೀಮ
ವಿಶ್ವದ ನಾಲಿಗೆಯ ಮೇಲೆ
ನಲಿದಾಡುತ್ತಿದೆ ನಿಮ್ಮದೇ ನಾಮ.

ನಿಮ್ಮ ರೂಪು ಕಂಡೊಡನೆ
ಮನದೊಳಗೆ ರೋಮಾಂಚನ
ಆ ನೋಟದ ನೋಟಕ್ಕೆ
ಎದೆಯಲ್ಲಿ ಉಲ್ಲಾಸದ ಸಿಂಚನ.

ನಿಮ್ಮ ಒಳಪು ಕಣ್ಣುಗಳು
ಅರೆಕ್ಷಣ ಮೈ ಮರೆತರೆ
ಎಚ್ಚರಿಸುತ್ತವೆ.
ನುಡಿ-ಬರೆಹಗಳು
ಅರೆಗಳಿಗೆ ದಾರಿ ತಪ್ಪಿದರೆ
ದಿಕ್ಕು ತೋರಿಸುತ್ತವೆ.

ಅದಮ್ಯ ಜ್ಞಾನದ ಬೆಳಕಿಗೆ
ಶರಣೆನ್ನುತ್ತಿದೆ ಈ ಜಗತ್ತು,
ಜಗಕೆ ಸಮಾನತೆಯ ಪಾಠ ಕಲಿಸಿ
ಬುದ್ಧನ ಪ್ರೀತಿಯ ಪಾಯಸವ ಉಣಿಸಿದಿರಿ

ನೀವಿಲ್ಲದ ಈ ಹೊತ್ತು
ಕಣ್ಣುಮುಚ್ಚಿ ಬಿಡುವಷ್ಟರಲ್ಲಿ
ಎಲ್ಲೆಲ್ಲೂ ಅಸಮಾನತೆಯ ಕತ್ತಲ ದರ್ಶನ..
ಭೀಮನೆಂಬ ಜ್ಞಾನದ ಮಹಾಬೆಳಕಿನಲಿ
ನುಡಿ-ಬರೆಹಗಳು ಎದೆಯಾಳಕ್ಕೆ ಇಳಿದು
ಸರಿಯಲಿ ಅಜ್ಞಾನದ ಕತ್ತಲು.

– ಡಾ. ಬಿ. ಆರ್. ಕೃಷ್ಣಕುಮಾರ್,
ಚಾಮರಾಜನಗರ