ಪ್ರಕಾಶ್ ಮಲ್ಕಿಒಡೆಯರ್ ಅವರ ಹನಿಗವಿತೆಗಳು!
ಪ್ರಸ್ತುತ……1
ಕೊನೆಯ ಕ್ಷಣ ದ
ವರೆಗೂ ನಾವು ಕಾಯುತ್ತೇವೆ
ಮತದಾನ ಮಾಡಲಿಕ್ಕೆ;
ತಡಮಾಡ ಬೇಡಿ
ನೀವು
ಹಣ ಹಂಚಲಿಕ್ಕೆ!
ನಾಟಕ…….2
ತಂಗಳನ್ನಕ್ಕೆ
ಒಗ್ಗರಣೆ ಕೊಟ್ಟು
ರುಚಿ ಮಾಡಿ ತಿನ್ನಬಹುದಾದರೂ
ಉದರ ಒದರದಿದ್ದೀತೆ?
ಹಳಸಿದ ಸಂಬಂಧಗಳಿಗೆ
ತೇಪೆ ಹಚ್ಚಿ ಮೇಲೆ
ನಗುಮೊಗ ತೋರಿದರೂ
ಒಳಮನಸ್ಸು
ಪ್ರೀತಿ ತೋರೀತೆ?
ಬದುಕು…….3
ಉಸಿರಿರುವ ತನಕ
ಹೆಸರಿದ್ದರೆ
ಅದು ಪ್ರಾಪಂಚಿಕ
ಬದುಕು:
ಉಸಿರು ನಿಂತರೂ
ಹೆಸರಿದ್ದರೆ
ಅದು ಸಾರ್ಥಕ ಬದುಕು!
ಪುಡಾರಿ……4
ನಮ್ಮ ರಾಜಕೀಯ
ನಾಯಕರ ತಲೆಯಲ್ಲಿ
ಇದ್ದಿದ್ದರೆ ಮೆದುಳು;
ತಲೆ ಕೆಟ್ಟವರಂತೆ ಹೀಗೆ
ಬರುತ್ತಿರಲಿಲ್ಲ ಅವರ
ಬಾಯಿಂದ ಪುಂಖಾನು ಪುಂಖ
ಬೈಗುಳು!
ಸಾವು……5
ನೀನೊಬ್ಳೆ ಹೋಗ್ತೀನಿ
ಅಂತಿಯಾ!
ಗೊತ್ತು ಗುರಿಯಿಲ್ದ ದಾರಿ
ನನ್ಗೆ ನಿಂದೇ ಚಿಂತಿ
“ನೀನೆಲ್ಲಿ ದಾರಿ ತಪ್ತೀಯಾ?”
ನಿನ್ನಜೊತೆ ನಾನೂ ಬರ್ತೀನಿ
ಏನಂತೀಯಾ?
-ಪ್ರಕಾಶ್ ಮಲ್ಕಿಒಡೆಯರ್
ಹೂವಿನ ಹಡಗಲಿ
*****


