ಅನುದಿನ ಕವನ-೩೩೧, ಕವಯತ್ರಿ:ಧರಣೀಪ್ರಿಯೆ, ದಾವಣಗೆರೆ, ಕವನದ ಶೀರ್ಷಿಕೆ: ಕೆಂದಾವರೆ

ಕೆಂದಾವರೆ

ತರಣಿ ಕಿರಣದ ಭಾವದೊಲವಿಗೆ
ಧರಣಿಯಂದದಿ ಬಿರಿದು ತಾವರೆ
ಬೆರಗು ಮೂಡುವ ಬಣ್ಣ ದೊಂದಿಗೆ ಸೊಬಗ ಬೀರುತಿದೆ|
ಕರೆದು ಮಂದಿಗೆ ಖುಷಿಯ ನೀಡುತ
ಕೆರೆಯ ಜಲದಲಿ ಪಸಿರಿನೆಲೆಗಳು
ಮಿರುಗಿ ಕೆಂಪನೆ ಕಮಲ ಚಂದದಿ ನಗುವ ಸೂಸುತಿದೆ||

ಆಸುಪಾಸಿನ ವನದ ಸಿರಿಯದು
ಮಾಸಿಹೋಗದನೆನಪಿನಂಗಳ
ಬೀಸಿಗಾಳಿಯುಹಿತದಿ ಮನವನು ಮುದವಗೊಳಿಸುತಿದೆ|
ತಾಸುಗಟ್ಟಲೆ ಕಾಲಹರಣದಿ
ಘಾಸಿಯಾದಹ ಮನಕೆ ಹರುಷವ
ಬೆಸೆದು ನವಿರಿನ ಭಾವಮೂಡಿಸಿ ಚಂದಗಾಣುತಿದೆ|

ಏನು ಸುಂದರ ಸೃಷ್ಟಿಕರ್ತನ
ಜಾಣತನದಲಿ ತಳೆದಜೀವವು
ಕಾನಮಧ್ಯದಿ ತಾಣ ಬಾನಿಗೆ ಸನಿಹಪೆನಿಸುತಿದೆ|
ದೀನನಾಥನ ಕರದ ಚಳಕವು
ಬಾನುಭುವಿಯಲಿ ಬಂಧವಿತ್ತನು
ಕಾಣ್ವಮಂದಿಗೆ ಸೆಳೆತವಿತ್ತನು ಚೆಲುವ ಬೀರುತಿದೆ||

-ಧರಣೀಪ್ರಿಯೆ
ದಾವಣಗೆರೆ
*****