ಅನುದಿನ ಕವನ-೫೬೯, ಕವಿ:ಎಲ್ವಿ, ಬೆಂಗಳೂರು, ಕವನದ ಶೀರ್ಷಿಕೆ: ಕವಿತೆ ಎಂದರೆ….

ಕವಿತೆ ಎಂದರೆ……

ಕವಿತೆ ಎಂದರೆ
ಸವೆದ
ಚಪ್ಪಲಿಯ ಮೇಲೆ
ಮೂಡಿದ ಅವ್ವ ಳ ಪಾದದ
ಗುರುತು

ತಿಂಗಳಿರುಳಿನಲಿ ಅಕ್ಕ
ಅಂಗಳವ ಸಾರಿಸಿ
ಚುಕ್ಕಿಯಿಟ್ಟು ಆಕಾಶಕೆ
ಗೆರೆಯೆಳೆದ ರಂಗೋಲಿ –

ಕಂದನ ಗಲ್ಲದ
ಮೇಲಿನ
ಅಮ್ಮನ ಮುತ್ತಿಗೆ
ಅಸ್ತವ್ಯಸ್ತ ಅಂಜನ –

ನೆಲದ ಪಾಲಾದ
ರೆಕ್ಕೆ ಸೋತ ಹಕ್ಕಿಯೊಂದರ
ಹೂ ಹಗುರ ಗರಿ

ಎಳೆ ಕಂದನ ಕೈಯಲಿ
ನಲುಗುವ
ದೇವರ ಮೇಲಿನ
ಹೂ –

-ಎಲ್ವಿ,(ಡಾ.ಲಕ್ಷ್ಮಣ ವಿ.ಎ) ಬೆಂಗಳೂರು

*****