ಒಂದು ಸಮಾಧಾನಕ್ಕಾಗಿ
ಎಷ್ಟೊಂದು ಹುಡುಕಾಡಬೇಕು
ಒಳಗಿನ ನಿಜಗಳ
ಮುಚ್ಚಿ ಬದುಕುವವರ ನಡುವೆ
ಪ್ರೇಮವೋ ಕಾಮವೋ
ಸ್ನೇಹವೋ ದ್ವೇಷವೋ
ಒಳಗನ್ನೇ ಅರಿಯದವರ ತಲೆಯಲ್ಲಿ
ಬರೀ ಸೀಳು ಚಿಂತನೆ
ಸರಳ ಸರಾಗ
ಪರಾಗ ಹೀರುವ ತುಂಬಿಗೆ
ಸೆಳೆದು ಮೋಹಿಸುವ ಕೀಟಗಳಿಗೆ
ರಾಜಕೀಯ ಬಡಿವಾರವಿಲ್ಲ
ನಮ್ಮದು ಹಾಗಲ್ಲ
ಬೇಡವಾದ ಹೊರೆಗಳನ್ನೇ
ನಂಬಿ ಹೊತ್ತು
ಕೃಶರಾಗಿ ಮರುಭೂಮಿಯಾಗುತ್ತೇವೆ
ಚಿಗುರುವ ಅರಳುವ
ಕೂಡುವ ಬಣ್ಣಗಳ
ಮರೀಚಿಕೆಯ ಹಿಂಬಾಲಿಸಿ
ಉರಿಬಿಸಿಲಿಗೆ ಹೆಣವಾಗುತ್ತೇವೆ
ಪಾತಾಳಗರಡಿಯಲ್ಲಿಳಿದು
ಕೆದಕಿದಷ್ಟೂ ಕತ್ತಲು
ನಿಟ್ಟುಸಿರ ಮುಗ್ಗಲು
ಒಂದು ಸಮಾಧಾನಕ್ಕಾಗಿ
ಒಂದು ಹುಟ್ಟು ಒಂದು ಸಾವು
-ಮಲ್ಲಿಕಾರ್ಜುನಗೌಡ ತೂಲಹಳ್ಳಿ
*****