ಮೋಹಕ ಗುಲ್ಮೊಹರ್….
ವೈಶಾಖದ ಬಿರುಬಿಸಿಲಿಗೆ ಒಳಗೊಳಗೇ
ಬೆಂದು ಮುದುಡಿಕೊಂಡ ಗಿಡಬಳ್ಳಿ
ಸಾಲುಮರಗಳ ರಸ್ತೆಯಿಕ್ಕೆಲವೂ
ಕುಲುಕುಲು ನಗುವಿನೊಂದಿಗೆ
ನಡು ಕುಲುಕಿಸುತ್ತಾ ನಿಂತಿದೆ
ಅಪೂರ್ವ ಚೆಲುವು
ನಿಂತಂತೆ ದೇವಲೋಕದ ಒಲವು
ಪೂರ್ವದಿಂದ ಸೀದಾ ನಡುನೆತ್ತಿಯ ಮೇಲೆ
ಬಂದುನಿಂತ ಸೂರ್ಯನಿಗೆ ಮುಖಮಾಡಿ
ಸುಡುಬಿಸಿಲೇ ಪ್ರಾಣವೆನ್ನುವ ಹಾಗೆ
ಬಿಸಿಲ ನೆತ್ತರ ಕುಡಿದು ನಗುವ
ಕೆಂಪು ಕೆನ್ನೆಯ ಕನ್ನೆ
ಸುಡುಸುಡು ಬಿಸಿಲಮಳೆ ಸುರಿದಷ್ಟೂ
ಹೊತ್ತು ಹರವಿ ಒಡ್ಡಿಕೊಂಡು ತನ್ನೊಡಲ
ಹೀರುತ್ತಾಳೆ ಮಾಯದಲಿ ಪ್ರೇಮಸನ್ನೆ
ಧಗೆಗೆ ಬೆವೆತು ಬಸಿರಾದ
ಗರ್ಭದೊಳಗಿಂದ
ಜೀವದೊಲುಮೆಯ ಕೆಂಪು ಹೂವರಳು
ಮುಗುಳು ಮಾಟದಲಿ ಮನದನ್ನೆ
ನಾನೇ ನಾನೇ ಸೂರ್ಯಸಖಿ
ಎನ್ನುತ್ತಿದ್ದಾಳೆ ವಯ್ಯಾರದಲಿ
ಮೋಹಕ ಗುಲ್ಮೊಹರ್
ಡಾ.ಕೆ. ಎನ್. ಲಾವಣ್ಯ ಪ್ರಭ, ಮೈಸೂರು
—–