ಅನುದಿನ ಕವನ-೧೫೮೬, ಕವಿ: -ಎ.ಎನ್.ರಮೇಶ್, ಗುಬ್ಬಿ., ಕವನದ ಶೀರ್ಷಿಕೆ: ದೀಪ್ತಿ….!

“ಇದು ಬದುಕಿನ ಹಾದಿಯ ಬೆಳಗುತ ಬೆಳಕಾಗಿಸುವ ಕವಿತೆ. ಅಡಿಗಡಿಗೂ ದೀಪ್ತಿಯಾಗಿ ಜೀವ-ಜೀವನಕೆ ಸ್ಪೂರ್ತಿಯಾಗುವ ಬೆಳಕಿನ ಭಾವಗೀತೆ. ಸಣ್ಣ ಸಣ್ಣ ಸಮಸ್ಯೆಗೂ ಕುಸಿದು ಕಂಗಾಲಾಗುವ ಭಾವದ ಹಕ್ಕಿ, ಒಮ್ಮೆ ಖಿನ್ನತೆಯಿಂದ ಗೂಡಿನಿಂದ ಹೊರಬಂದು, ಸಾವಿರ ಸಂಕಷ್ಟ ಸವಾಲುಗಳ ನಡುವೆಯೂ ನಗುನಗುತ ಸಾಧನೆಯ ಶೃಂಗದತ್ತ ಹಾರುತಿರುವ ಜೀವಗಳನ್ನು ನೋಡಬೇಕು. ಹೊರಗಿನ ಸಾಧಕರ ಬದುಕು, ನಮ್ಮೊಳಗೆ ಬೆಳಕಾದಾಗ ಮಾತ್ರ ಬಾಳು ಹಸನಾದೀತು. ಉಸಿರು ಹೆಸರಾಗಿ ಹಸಿರಾದೀತು. ಏನಂತೀರಾ..?”
– ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

ದೀಪ್ತಿ..!

ಕಂಗಳಿದ್ದು ಕಲ್ಲಾದ
ಜಡಜನರ ಮುಂದೆ
ಕಣ್ಣಿಲ್ಲದೆ ಕನಸುಗಳ
ಬೆನ್ನತ್ತುವವವರ ಕಂಡೆ.!

ಅಡಿಗಡಿಗೂ ಸುಮ್ಮನೆ
ಕೊರಗುವರ ಮುಂದೆ
ಪಾದವಿಲ್ಲದೆ ಛಲದಿ
ದುಡಿವವರ ಕಂಡೆ.!

ನೋವುಗಳ ಪಕ್ಕಕಿರಿಸಿ
ಸವಾಲುಗಳ ಸ್ವೀಕರಿಸಿ
ಅನುಕಂಪಗಳ ಧಿಕ್ಕರಿಸಿ
ಬದುಕುವವರ ಕಂಡೆ.!

ಇಲ್ಲಗಳ ನಡುವೆಯೂ
ಇರುವುದನೆ ಸಂಭ್ರಮಿಸಿ
ಸ್ವಾಭಿಮಾನಕೆ ಹಂಬಲಿಸಿ
ಬಾಳುವವರ ಕಂಡೆ.!

ಎಲ್ಲವಿದ್ದು ಗೊಣಗುತ್ತ
ಹೆಣಗುವವರ ಎದುರು
ಏನಿಲ್ಲದೆಯು ಎದೆಗುಂದದೆ
ಎದುರಿಸುವವರ ಕಂಡೆ.!

ಬದುಕು ವೇದನೆ
ಎನ್ನುವವರ ಎದುರು
ಬದುಕಿ ಸಾಧಿಸುವ
ಸಾಧಕರ ಕಂಡೆ..!!

-ಎ.ಎನ್.ರಮೇಶ್, ಗುಬ್ಬಿ.

Leave a Reply

Your email address will not be published. Required fields are marked *