ಅನುದಿನ ಕವನ-೧೫೮೮, ಕವಿ:ಬಸೂ, ಧಾರವಾಡ

ಬೇಲಿಯನ್ನು ಅವರು ಎತ್ತರವಾಗಿಯೇ ಕಟ್ಟಿದ್ದರು
ವಸಂತ ನನಗೆ ಘಮದ ಆತ್ಮವಾಗುವುದು ಕಲಿಸಿತು

ಪಂಜರವನ್ನು ಅವರು ಬಲವಾಗಿಯೇ ತಯಾರಿಸಿದ್ದರು
ವಸಂತ ನನಗೆ ಹಾಡುಹಕ್ಕಿಯ ಸ್ವರವಾಗುವುದು ಕಲಿಸಿತು

ಕಬ್ಬಿಣದ ಬಾಗಿಲುಗಳನ್ನೇ ಅವರು ಮನೆಗೆ ಇರಿಸಿದ್ದರು
ವಸಂತ ನನಗೆ ನಂಬುಗೆ ಬೆಳೆಸಿ ಕನಸಾಗುವುದು ಕಲಿಸಿತು

ಸುಂದರ ಎಂಬ ಶಬುದಕ್ಕೆ ಅವರು ಬಣ್ಣ ಬಳಿದು ನಿಲಿಸಿದ್ದರು
ವಸಂತ ನನಗೆ ಈ ರೂಪ ಕುರೂಪಗಳ ಬೇಧವಳಿಸಲು ಕಲಿಸಿತು

ಹೂಗಳನ್ನೇ ಆಯ್ದುಕೊಂಡು ಅವರು ಕಲ್ಲಾಗಿಸುತ ನಡೆದರು
ವಸಂತ ನನಗೆ ಕಲ್ಲುಗಳ ಪ್ರೀತಿಸಿ ಮನುಷ್ಯನಾಗಿಸುವುದು ಕಲಿಸಿತು

-ಬಸೂ, ಧಾರವಾಡ