ಅನುದಿನ ಕವನ-೧೫೯೮ , ಕವಿ: ಲೋಕೇಶ್ ಮನ್ವಿತಾ(ಲೋಕಿ), ಬೆಂಗಳೂರು

ದಣಿವಾದ
ಪದವೊಂದು
ದಣಿವಾರಿಸಿಕೊಳ್ಳಲು
ಯತ್ನಿಸುತ್ತಿರುವಾಗಲೇ
ಕಂಗಳಿಗೆ ಬಿದ್ದಿದ್ದು

ನೀರು ಕೊಡಲೇ ?
ತಿಂಡಿ ತಿಂದ್ಯಾ ?
ಯಾರು? ನಿನ್ನ ದೂಡಿದರೂ
ಎಂಬಿತ್ಯಾದಿ ಪ್ರಶ್ನೆಗಳನ್ನು
ಎಸೆದ ಮೇಲೂ
ಅದರ ಮೌನ
ನನ್ನನ್ನು ಮೌನವಾಗಿಸಿತು

ಅದು
ಸಹಿಸಿಕೊಂಡು ಉಂಟಾದ
ಪದರಗಳ ಮೇಲೆ
ಬೆರಳಿಟ್ಟಾಗಲೇ ಅವಕ್ಕಾಗಿದ್ದು

ಎಷ್ಟು ನಿರ್ಲಕ್ಷಿಸಿದ್ದೆ
ಸ್ವಾರ್ಥ ಮನದ
ನಿರಾಳಕ್ಕೆ
ತೀವ್ರಕರ ಉದಾಸೀನತೆಯ
ನಡುವೆಯು
ಅದರ ಪ್ರತಿಮಾತು
ಇದುವರೆಗೂ ಕೇಳಿರಲೇ ಇಲ್ಲ

ಅದರ ಹೆಗಲಿಗೆ
ಜವಬ್ದಾರಿ ಏರಿಸಿ
ನಾನಿದ್ದರೂ ಎಲ್ಲ ಮರೆತಂತೆ
ನೋವೆಷ್ಟು
ಸಹನೀಯ ಪದ

ಸಿಡಿಮಿಡಿ ಕಂಡಿಲ್ಲ
ಗೊಣಗಾಟ ಕೇಳಿಲ್ಲ
ಒಳಗೊಳಗೆ ಕುದಿಯುತ್ತಿರುವ
ಪಿಸು ದನಿಯು ತಲುಪಿಲ್ಲ
ತನ್ನ ಪಾಡಿಗೆ ತಾನುಳಿದ ನಿಸ್ವಾರ್ಥಿ

ನಿಜ
ಇದೀಗ
ದಣಿವಾರಿಸಿಕೊಳ್ಳಲೇಬೇಕಾಗಿದೆ
ಕಾರ್ಮಿಕನಂತೆ
ನನ್ನೊಳಗೆ
ದುಡಿದು
ಜಡವಾಗಿರುವ

ನೋವೆಂಬ ಪದ

-ಲೋಕೇಶ್ ಮನ್ವಿತಾ (ಲೋಕಿ), ಬೆಂಗಳೂರು