ಬಳ್ಳಾರಿ, ಮೇ 22: ಭಾರತರತ್ನ ಡಾ. ಬಿ ಆರ್ ಅಂಬೇಡ್ಕರ್ ರವರು ರಚಿಸಿದ ಸಂವಿಧಾನವು ನಮ್ಮಲ್ಲಿರುವ ತಾರತಮ್ಯ ಮನೋಭಾವನೆಯನ್ನು ಹೋಗಲಾಡಿಸಿ ನಾವೆಲ್ಲರೂ ಒಂದೇ ಎನ್ನುವ ಭಾವನೆ ಮೂಡಿಸಲು ಕಾರಣವಾಗಿದೆ ಎಂದು ಹಿರಿಯ ಮಾಜಿ ಸೈನಿಕ ಶೇಖ್ ಸಾಬ್ ಅವರು ಹೇಳಿದರು.
ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರ್ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಪ್ಪಗಲ್ಲು ಗ್ರಾಮದಲ್ಲಿ ಆಯೋಜಿಸಿರುವ ಎನ ಎಸ್ ಎಸ್ ಘಟಕಗಳ ವಾರ್ಷಿಕ ವಿಶೇಷ ಶಿಬಿರದಲ್ಲಿ ಎರಡನೆಯ ದಿನವಾದ ಬುಧವಾರ ಸಂಜೆ ದೇಶದ ಏಕತೆ ಮತ್ತು ಭಾವೈಕ್ಯತೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಭಾರತ ದೇಶ ಭೌಗೋಳಿಕವಾಗಿ ವಿಶಾಲವಾಗಿದ್ದು ಅನೇಕ ದೇಶಗಳ ಜೊತೆಗೆ ಗಡಿಯನ್ನು ಹಂಚಿಕೊಂಡಿದೆ. ವಿಶಾಲವಾದ ಗಡಿಗಳು ಇದ್ದರೂ ಕೂಡ ನಮ್ಮ ಸೈನಿಕರು ಹಗಲಿರುಳೆನ್ನದೆ ದೇಶದ ರಕ್ಷಣೆ ಮಾಡುವಲ್ಲಿ ನಿರಂತರ ಹೋರಾಡುತ್ತಿರುತ್ತಾರೆ ಎಂದು ತಿಳಿಸಿದರು. ನಾವೆಲ್ಲರೂ ಇಂದು ನೆಮ್ಮದಿಯ ಸುರಕ್ಷಿತವಾದ ಜೀವನ ನಡೆಸುತ್ತಿದ್ದೇವೆ ಎಂದರೆ ಗಡಿಯಲ್ಲಿ ನಮ್ಮ ಯೋಧರು ತಮ್ಮ ಕುಟುಂಬಗಳನ್ನು ತೊರೆದು ಪ್ರಾಣ ಒತ್ತೆ ಇಟ್ಟು ಗಡಿಗಳನ್ನು ಕಾಯುತ್ತಿರುವುದರಿಂದ ಇದು ಸಾಧ್ಯವಾಗಿದೆ ಎಂದರು. ಲಾಲ್ ಬಹುದ್ದೂರ್ ಶಾಸ್ತ್ರಿ ಅವರು ಜೈ ಜವಾನ್ ಜೈ ಕಿಸಾನ್ ಎಂದು ಕರೆ ನೀಡುವ ಮೂಲಕ ಸೈನಿಕ ಮತ್ತು ರೈತ ದೇಶಕ್ಕೆ ಎಷ್ಟು ಮುಖ್ಯ ಎನ್ನುವುದನ್ನು ತಿಳಿಸಿದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮತ್ತೋರ್ವ ಹಿರಿಯ ಮಾಜಿ ಸೈನಿಕರಾದ ಪ್ರಹ್ಲಾದ್ ರೆಡ್ಡಿ ಅವರುಮಾತನಾಡಿ, ಮೊಬೈಲ್ ಗಳು ಇಂದಿನ ಯುವಜನತೆಯನ್ನು ದಾರಿ ತಪ್ಪಿಸುತ್ತಿವೆ. ಈ ಹಿನ್ನಲೆಯಲ್ಲಿ ಮೊಬೈಲ್ ಬಳಕೆಯಲ್ಲಿ ಇತಿಮಿತಿ ಇರಬೇಕು ಎಂದು ಸಲಹೆ ನೀಡಿದರು.
ಹಿರಿಯ ಮಾಜಿ ಸೈನಿಕ ಲಕ್ಷ್ಮಣ ಮಾತನಾಡಿ, 1971ರಲ್ಲಿ ನಮ್ಮ ದೇಶದ ಸೈನಿಕರು ಪಾಕಿಸ್ತಾನದ 93 ಸಾವಿರ ಸೈನಿಕರನ್ನು ಶರಣಾಗತರನ್ನಾಗಿ ಮಾಡುವುದರ ಮೂಲಕ ದೇಶದ ಸೈನಿಕ ಶಕ್ತಿಯನ್ನು ಪ್ರಪಂಚಕ್ಕೆ ತೋರಿಸಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎನ್ಎಸ್ಎಸ್ ಘಟಕದ ಸಂಚಾಲಕ ಪ್ರೊ. ರಾಮಸ್ವಾಮಿ ಅವರು, ನಮ್ಮ ಭಾರತ ದೇಶದ ಪ್ರಪಂಚದಲ್ಲಿ ಬಲಾಢ್ಯ ರಾಷ್ಟ್ರಗಳಲ್ಲಿ ಒಂದಾಗಿದ್ದು ಇಂದು ಅಮೆರಿಕ ಚೀನಾ ದೇಶಗಳ ಜೊತೆಗೆ ಪೈಪೋಟಿ ನೀಡುತ್ತಿದೆ ಮತ್ತು ನಮ್ಮ ದೇಶದ ಅಪಾರ ಸೈನಿಕ ಶಕ್ತಿ ದೇಶದ ಭದ್ರತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಘಟಕಗಳ ಸಂಚಾಲಕರುಗಳಾದ ಡಾ. ಚನ್ನಬಸವಯ್ಯ ಹೆಚ್ ಎಮ್ , ಪ್ರೊ. ಪ್ರವೀಣ್ ಕುಮಾರ್ ಎಂ ಎನ್, ಉಪನ್ಯಾಸಕರಾದ ವೀರೇಶಯ್ಯ ಸ್ವಾಮಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಬಿಂದು ಪ್ರಾರ್ಥನೆ ಗೀತೆ ಹಾಡಿದಳು. ಸರೋಜಾ ಸ್ವಾಗತಿಸಿದರು. ಶಿಲ್ಪ ವಂದಿಸಿದರು. ವಿದ್ಯಾರ್ಥಿ ಶ್ರೀಧರ್ ನಿರೂಪಿಸಿದರು.