ನಿನ್ನ ಮೌನ ಅರಿಯದೆ
ನಿನ್ನ ಮೌನ ಅರಿಯದೆ ಹೋದೆ
ಮೌನದೊಳಗಿನ ಪ್ರೀತಿಯ ಕಾಣದೆ ಮರೆಯಾದೆ
ನಿನ್ನ ಪ್ರೀತಿ ಗುರುತಿಸದೆ ಅಳಿದೆ
ಪ್ರೀತಿಯ ಆಪ್ತತೆಗಿಷ್ಟು ಆಸರೆಯಾಗದೆ ಮಣ್ಣಾದೆ
ಮಾತಿನ ಬಾಣ ಎದುರಿಸಬಹುದೆ
ನಿನ್ನ ಮೌನದ ಹಿಮಶರವ ಚುಚ್ಚಿಕೊಂಡು ನವೆದೆ
ಮಾತಿನ ಕಹಿಯ ನುಂಗಬಹುದೆ
ನಿಗೂಢಮೌನ ಜ್ವಾಲಾಗ್ನಿ ಬಳಸಿ ಉಳಿಯಬಹುದೆ
ಕಣ್ಣ ಭಾಷೆಯಲ್ಲು ಕೊಂಕು ಕಂಡೆ
ಕಣ್ಣೀನಾಳದ ಒಲವತಂತಿಯ ಮೀಟದೆ ಬಳಲಿದೆ
ಹುಬ್ಬ ಸಂಜ್ಞೆಯಲ್ಲು ಸೋಲನುಂಡೆ
ಪ್ರೀತಿ ಛಾಯೆ ಸೋಕದಲೆ ಮುಗ್ಧನಾಗಿ ಹಿಂಜರಿದೆ
ಹೆಬ್ಬೆರಳ ಗೀರು ಗುರುತಿಸದಾದೆ
ಹೆಜ್ಜೆಗಳ ಗುರುತಲ್ಲಿ ಹೆಜ್ಜೆಯನಿಡದೆ ತಪ್ಪು ಮಾಡಿದೆ
ಗೆಜ್ಜೆಗಳ ಧನಿ ಹಿಂಬಾಲಿಸದಾದೆ
ಪ್ರೀತಿ ನಾದದ ಸಿಹಿಯಲ್ಲಿ ಬೆರೆಯದೆ ಬಯಲಾದೆ
ನಿನ್ನ ಮನೆ ದಾರಿ ತುಳಿಯದಾದೆ
ಮನದ ಒಲವಕರೆಯ ಆಲಿಸದೆ ಏಕಾಂಗಿಯಾದೆ
ನಿನ್ನ ಬೀದಿ ತಿರುವಲ್ಲಿ ನಿಲ್ಲದಾದೆ
ಸಹನೆಯ ಕೊಂದುಕೊಂಡು ಪ್ರೀತಿಗೆ ಹೊರಗಾದೆ
-ಟಿ.ಪಿ.ಉಮೇಶ್, ಹೊಳಲ್ಕೆರೆ
—–