ಹರಿದ ಶರಟಿನ ಬೆಳಕು
ಗಡಿಬಿಡಿಯಲ್ಲಿ ಎಷ್ಟೊಂದು ಜನರನ್ನು ಮರೆತೆ ಬಿಡುತ್ತೇವೆ?
ಎತ್ತಿ ಆಡಿಸಿದ ಕೈಗಳನು
ಹೆಗಲ ಮೇಲೆ ಹೊತ್ತು ಜಗವ ತೋರಿಸಿದವರನು
ಸಲೀಸಾಗಿ ಸ್ಮ್ರತಿಗೆ ಸರಿಸಿ
ನಡೆದು ಬಿಡುತ್ತೇವೆ ಸುಮ್ಮನೆ
ಹಚ್ಚಿಕೊಂಡ ಕೆಲಸಗಳ ನಡುವೆ
ಸಾಲಿಗೆ ಹೋಗುವಾಗ ಬೆಳಕು ತರುವನೆಂದುಕೊಂಡ ಅವೇ ಮುಖದ ಗೆರೆಗಳು!
ಕಚೇರಿಗೆ ಬಂದು ಕುಳಿತರೆ
ಲೆಕ್ಕ ಹಾಕುತಿದೆ ಮನ
ಲೋಕದ ಸಾಲಿ
ಬಿಟ್ಟು ಸಾಗಿ ಬಂದ ದೂರ
ಮಗನ ಕಾಗುಣಿತ ತಿದ್ದುವಾಗ
ಮೇಷ್ಟ್ರು ನೆನಪಾಗಿದ್ದೂ ಹೀಗೆ
ಕೋರ್ಟಿನಂಗಳದಲ್ಲಿ ಸಾಕ್ಷಿ ನುಡಿಯಲು ಕಾಯುತ್ತ ಕುಳಿತವಳು ಸುಮ್ಮನಿರಲಾರದೆ ಕಸಗುಡಿಸುವಾಗ…
ನೆನಪಾಗುತ್ತಾಳೆ ಅವ್ವ
ನೋಡಿಯೂ ನೋಡದಂತಿರುವ ಎಲ್ಲೋ ಮೂಲೆಯಲಿ
ಹರಿದ ಶರಟಿನ ಬೆಳಕಿನಲಿ
ಥಟ್ಟನೆ
ನೆನಪಾಗಿಬಿಟ್ಟ ಅಪ್ಪ!
-ಬಿ.ಶ್ರೀನಿವಾಸ, ದಾವಣಗೆರೆ