ಬೆಂಗಳೂರು, ಜು.10: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2024-25ನೇ ಸಾಲಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಪ್ರಸಕ್ತ ಸಾಲಿಗೂ ಮುಂದುವರೆಸಬೇಕು ಬೇಡಿಕೆ ಸೇರಿದಂತೆ ತಮ್ಮ ಹಲವು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘ ಗುರುವಾರ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಸಂಘದ ಅಧ್ಯಕ್ಷ ಲೋಕೇಶ್ ಪಿ.ಸಿ, ಗೌರವ ಅಧ್ಯಕ್ಷ ಅರಿಫ್ ಕಾರ್ಲೆ, ಸಹ ಕಾರ್ಯದರ್ಶಿ ಭರತೇಶ ಎಂ. ಮತ್ತಿತರ ಮುಖಂಡರ ನೇತೃತ್ವದಲ್ಲಿ ಜರುಗಿದ ಪ್ರತಿಭಟನೆಯಲ್ಲಿ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳ ಅತಿಥಿ ಉಪನ್ಯಾಸಕರು ಪಾಲ್ಗೊಂಡಿದ್ದರು. ಜೆಡಿಯು ಹಿರಿಯ ಮುಖಂಡ ಮಹಿಮಾ ಪಟೇಲ್ ಸೇರಿದಂತೆ ಹಲವುರೈತ ಮುಖಂಡರು, ಪ್ರಗತಿಪರ ಚಿಂತಕರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.
ರಾಜ್ಯಾಧ್ಯಕ್ಷ ಲೋಕೇಶ್ ಪಿ ಸಿ ಅವರು ಮಾತನಾಡಿ, ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಸಾವಿರಾರು ಅತಿಥಿ ಉಪನ್ಯಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಸರ್ಕಾರವನ್ನು ಒಕ್ಕೊರಲಿನಿಂದ ಒತ್ತಾಯಿಸಿದರು ಎಂದರು.
ಒಬ್ಬ ತಾತ್ಕಾಲಿಕ ನೌಕರನ ವಿರುದ್ಧ ಇನ್ನೊಬ್ಬ ತಾತ್ಕಾಲಿಕ ನೌಕರರನ್ನು ಆಯ್ಕೆ ಮಾಡಬಾರದು ಎಂಬ ಅನೇಕ ನಿದರ್ಶನಗಳಿದ್ದರೂ, ನೇರವಾಗಿ ನಮ್ಮದೇ ಪ್ರಕರಣಗಳಲ್ಲಿ ಈ ವಿಷಯವನ್ನು ಉಲ್ಲೇಖಿಸಿ ನ್ಯಾಯಾಲಯವು ಮಧ್ಯಂತರ ತೀರ್ಪು ನೀಡಿದ್ದರೂ ಕೂಡ ಪರಿಗಣಿಸದೆ 2025-26ರ ಶೈಕ್ಷಣಿಕ ವರ್ಷಕ್ಕೆ ಹೊಸ ಅತಿಥಿ ಉಪನ್ಯಾಸಕರ ಆಯ್ಕೆಗೆ ಈಗಾಗಲೇ ಅಧಿಸೂಚನೆಯನ್ನು ಹೊರಡಿಸಿದ್ದು ದುರದೃಷ್ಟಕರ ಎಂದರು. ಲನೆಟ್, ಸ್ಲೆಟ್ ಮತ್ತುಬಪಿಎಚ್.ಡಿ ಪದವಿ ಹೊಂದಿರುವ ಅಭ್ಯರ್ಥಿಗಳನ್ನು ಮಾತ್ರ ಪರಿಗಣಿಸಲಾಗುವುದು ಎಂದು ಹೇಳಿರುವ ಅಧಿಸೂಚನೆಯನ್ನು ಕೂಡಲೇ ಹಿಂಪಡೆದು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಮುಂದುವರೆಯಲು ಅವಕಾಶ ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಲಭ್ಯವಿರುವ ಕಾರ್ಯಭಾರಕ್ಕೆ 2024-25ನೇ ಸಾಲಿನಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನೇ ಆಯ್ಕೆ ಮಾಡಿಕೊಂಡು, ಉಳಿದ ಕಾರ್ಯಭಾರಕ್ಕೆ ಮಾತ್ರ ಹೊಸದಾಗಿ ನೇಮಕಾತಿ ಮಾಡಿಕೊಳ್ಳಬೇಕೆಂದು ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಆರೀಫ್ ಕಾರ್ಲೆ ಸರ್ಕಾರ ಮತ್ತು ಕಾಲೇಜು ಶಿಕ್ಷಣ ಇಲಾಖೆಗೆ ಆಗ್ರಹಿಸಿದರು.
ಮಹಿಮಾಪಟೇಲ್ ಅವರು ಮಾತನಾಡಿ ಐದು, ಹತ್ತು, ಇಪ್ಪತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸೇವಾನುಭವ ಹೊಂದಿರುವ ಅತಿಥಿ ಉಪನ್ಯಾಸಕರನ್ನು ಮುಂದುವರೆಸುವುದು ನ್ಯಾಯ ಎಂದರು.
ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳ ಮುಖಂಡರಾದ ಭರತೇಶ ಎಂ, ಸಿದ್ದೇಶ್, ಶಿವಮೂರ್ತಿ ಚಿಂತ್ರಪಳ್ಳಿ,ರಾಘವೇಂದ್ರ ಚೌಡಿಕಿ, ಆರುಂಧತಿ, ರಾಜಲಕ್ಷ್ಮಿ, ವಿಶ್ವನಾಥ್, ಟಿ. ಜಯರಾಂ, ಭರತೇಶ ಎಂ , ರಾಮಚಂದ್ರರಾವ್, ಎರಿಸ್ವಾಮಿ, ಹರೀಶ್ ಡಿಎಲ್, ಸಿದ್ದೇಶ್ ಶೆಟ್ಟಿ, ಸತೀಶ್ ಎಂ, ವಿಷ್ಣು ಹಡಪದ್, ರುದ್ರಮುನಿ, ವೀರಯ್ಯ ಸೇರಿದಂತೆ ನೂರಾರು ಅತಿಥಿ ಉಪನ್ಯಾಸಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.