ಅನುದಿನ ಕವನ-೧೬೫೫, ಕವಿ: ಎ ಎಂ ಪಿ‌ ವೀರೇಶಸ್ವಾಮಿ, ಹೊಳಗುಂದಿ, ಕವನದ ಶೀರ್ಷಿಕೆ: ಆ ಮನೆ….ಈ ಮನೆ.

ಆ ಮನೆ….ಈ ಮನೆ.

ಆ ಮನೆಯ ತಂಗಾಳಿ ಈ ಮನೆಗೆ
ಈ ಮನೆಯ ಹೊಂಬೆಳಕು ಆ ಮನೆಗೆ
ಸೋಂಕಲು ಸಂಧಿಸಲೊಂದು ಸಣ್ಣ ಸಂಧಿ
ಮನೆ ಮನಗಳ ಭಾದವ್ಯದ ಮಹಾ ಸಂಧಿ

ಆ ಮನೆಯ ಬೆಲ್ಲ ಬೇಳೆ ಬೆಣ್ಣೆಯು
ಈ ಮನೆಯಲಿ ಹೋಳಿಗೆ ತುಪ್ಪವಾಗಿ
ಆ ಮನೆ ಈ ಮನೆ ಹೃದಯಗಳು ಬೆಸೆದು
ಸವಿದವು ಆನಂದದಿ ಸಂಧಿಯಲಿ ಒಂದಾಗಿ

ಆ ಮನೆಯ ಹನುಮ ಈ ಮನೆಯ ಆಸ್ಮಾ
ಕೂಡಿ ಆಡಿ ಜಗಳ ಕಾದು ಮತ್ತೆ ಒಂದಾದರು
ಹನುಮನ ಪ್ರೀತಿ ಬಳ್ಳಿಗೆ ಆಸ್ಮಾ ನೀರೆರೆಯೆ
ಸಂಧಿಯಲಿ ಪ್ರೇಮ ಗುಲಾಬಿ ಪರಿಮಳಿಸಿತು

ಆ ಮನೆ ಗಂಧ ಈ ಮನೆಗದು ದುರ್ಗಂಧ
ಆ ಮನೆಯ ಬೆಳಕು ಈ ಮನೆಗದು ಬೆಂಕಿ
ಹಸಿರಲೆ ಬಾಡಿ ಕೆಂಗುಲಾಬಿ ಮುರುಟಿ
ದಗದಗಿಸಿತು ಜ್ವಾಲೆ ಮಹಾ ಸಂಧಿಯಲಿ!

ಬಾಂಧವ್ಯದ ಬುನಾದಿಗೆ ಕ್ರೌರ್ಯದ ಕಲ್ಲು ಮಣ್ಣು
ಅಸಹನೆಯ ಗೋಡೆಗೆ ಅಹಂಕಾರದ ಅಲಂಕಾರ
ಆ ಮನೆಯ ಗಾಳಿ ಬೆಳಕು ಈ ಮನೆಗೆ ಸೋಂಕದು
ದಪ್ಪವಾಗಿದೆ ಮಹಾಗೋಡೆ ಸಂಧಿ ಬಂದಿಯಾಗಿಸಿ

ಗೋಡೆಯ ಮೇಲೆ ಗಿಡ ಅಲ್ಲಿ ಗುಬ್ಬಿ ಗೂಡು
ಆ ಮನೆ ಅಕ್ಕಿ ಈ ಮನೆ ಗೋದಿ ಹೆಕ್ಕಿ ತಂದು
ಹಂಚಿ ತಿಂದ ಗುಬ್ಬಚ್ಚಿ ಹಾರಿವೆ ಆಕಾಶದಿ ಗರಿಬಿಚ್ಚಿ
ಹರಿದು ತಿಂದ ಮನ ಜಾರಿವೆ ಪ್ರಪಾತದಿ ಮಣ್ಮುಕ್ಕಿ.


-ಎ.ಎಂ.ಪಿ ವೀರೇಶಸ್ವಾಮಿ,
ಹೊಳಗುಂದಿ

One thought on “ಅನುದಿನ ಕವನ-೧೬೫೫, ಕವಿ: ಎ ಎಂ ಪಿ‌ ವೀರೇಶಸ್ವಾಮಿ, ಹೊಳಗುಂದಿ, ಕವನದ ಶೀರ್ಷಿಕೆ: ಆ ಮನೆ….ಈ ಮನೆ.

Comments are closed.