ಅನುದಿನ ಕವನ-೧೬೬೫, ಕವಿ: ಟಿ.ಪಿ.ಉಮೇಶ್, ಹೊಳಲ್ಕೆರೆ, ಕವನದ ಶೀರ್ಷಿಕೆ:ನಿನ್ನ ಒಲವು ದೊರೆತ ಮೇಲೆ!

ನಿನ್ನ ಒಲವು ದೊರೆತ ಮೇಲೆ!

ನಿನ್ನ ಒಲವು ದೊರೆತ ಮೇಲೆ
ಹೃದಯಕ್ಕೆ ಬದುಕಲೆಬೇಕೆಂಬ ಆಸೆಯಾಗಿದೆ!
ನಿನ್ನ ಚೆಲುವು ಸೆಳೆದ ಮೇಲೆ
ಮೈಮನ ಪುಟಗೊಂಡ ರಂಗಿನ ಹಕ್ಕಿಯಾಗಿದೆ!

ನಿನ್ನ ನವಿರು ಸ್ಪರ್ಶದ ಪುಳಕ
ಹೊಸತು ಜೀವನಕ್ಕೆ ಸ್ಪೂರ್ತಿ ಚೈತನ್ಯವಾಗಿದೆ!
ನಿನ್ನ ಮಲ್ಲಿಗೆ ನಗೆಯ ಜಳಕ
ಗೆಲ್ಲುವ ಗುರಿಯೆಡೆಗೆ ಉತ್ಸಾಹದ ಕಣ್ಣಾಗಿದೆ!

ನಿನ್ನ ಸಂತಸ ನಡೆಯ ಚೇತನ
ಸೋಲುಗಳ ಮರೆಮಾಚಿ ಮಂದಾರವಾಗಿದೆ!
ನಿನ್ನ ನೇರ ದೃಷ್ಟಿಯ ಆಲಿಂಗನ
ಮತ್ತೊಂದ ಬಯಸಿ ಬೀಳದಂತೆ ಬಿಗಿದಪ್ಪಿದೆ!

ನಿನ್ನ ತುಂಬು ಹೆರಳಿನ ಬಳುಕು
ತಲ್ಲಣಗಳ ಸಿಗಿದು ಹೊಂಗನಸುಗಳ ಹೆಣೆದಿದೆ!
ನಿನ್ನ ಛಲದ ಮಾತಿನ ಚಬುಕು
ಭಯವ ಅಳಿದು ಭರವಸೆಯ ನಾಡಿಯಾಗಿದೆ!

ನಿನ್ನ ಒಲವು ಬದುಕಾದ ಮೇಲೆ
ಬವಣೆಗಳ ಬಸಿದು ಬಂಗಾರದ ಸಿರಿಯಾಗಿದೆ!
ನಿನ್ನ ಮನವು ನಾನಾದ ಮೇಲೆ
ನಾನೆಲ್ಲ ಕುಸಿದು ನಿನ್ನೆಸರಿಗಾಗಿ ಉಸಿರಾಗಿದೆ!

-ಟಿ.ಪಿ.ಉಮೇಶ್, ಹೊಳಲ್ಕೆರೆ