ಅನುದಿನ ಕವನ-೧೬೮೧, ಹಿರಿಯ ಕವಯಿತ್ರಿ: ಸರೋಜಿನಿ ಪಡಸಲಗಿ, ಬೆಂಗಳೂರು, ಕವನದ ಶೀರ್ಷಿಕೆ: ನೆಟ್ಟು ದಿಟ್ಟಿ ಅಗಮ್ಯದೆಡೆ….!!

ನೆಟ್ಟು ದಿಟ್ಟಿ ಅಗಮ್ಯದೆಡೆ….!!

ಯಾಕೋ ಈಗೀಗ ಏನೋ ಗೊಂದಲ
ಯೋಚನೆ ಮೀರಿ ವಿಚಾರಗಳ ಗಲಗಲ
ಮನದಲ್ಲೊ ಎಲ್ಲ ವೀಕ್ಷೀಸೊ ಬುದ್ಧಿಲೊ
ಉಂಹೂಂ ಬಾರದೆ ಅರಿವಿಗೆ ಗದ್ದಲ

ಹೋಗಲಿ ಬಿಡೀಗ ಚಡಪಡಿಕೆ ಯಾತಕ್ಕೆ
ಮಾತ್ರ ಬಲು ನಿಚ್ಚಳ ತಪ್ಪದ ಹಂಬಲಿಕೆ
ಕಳೆದು ಹೋದ ಈಗ ಸಧ್ಯ ದಾಟಿ ಬಂದ
ದಾರಿಯ ಮತ್ತೆಂದು ಸಿಗದ ಚಡಾವಿಗಾಗಿ

ಧಡಪಡಿಸಿ ಆಸರೆ ಎಲ್ಲೆಡೆ ಹುಡುಕಿದರೂ
ಎಟುಕಲೆ ಇಲ್ಲ ಇಷ್ಟುದ್ದ ಕೈ ಚಾಚಿದರೂ
ಆದದ್ದಿಷ್ಟೆ ಬೇಕೋ ಬೇಡವೊ ಗೊತ್ತಿಲ್ಲ
ನಡೆದಿದೆ ಅನೂಹ್ಯ ಜಾರುಬಂಡೆಯಾಟ

ಮರುಳೆ ಅಡ್ಹಲಗೆ ಮೇಲೆಲ್ಲಿ ವಿಚಾರಕ್ಕೆಡೆ
ಸಿಕ್ಕರೂ ಅತ್ತಲೊ ಇತ್ತಲೊ ವಾಲುವುದೆ
ನೋಡಿ ಸ್ವಂತದಲ್ಲದ ಸಮಯದ ಹಿಂದೆ
ಸುಮ್ನಿರೋದಷ್ಟೆ ನೆಟ್ಟು ದಿಟ್ಟಿ ಅಗಮ್ಯದೆಡೆ!!


-ಸರೋಜಿನಿ ಪಡಸಲಗಿ
ಬೆಂಗಳೂರು
—–