ವರವ ನೀಡು ವರಮಹಾಲಕ್ಷ್ಮಿ
ಮಂಗಳ ರೂಪಿಣಿ ಮಂಜುಳಭಾಷಿಣಿ ಮಹಾಲಕ್ಷ್ಮಿ
ನಲಿಯುತ, ನಗುತಲಿ ಬಾರಮ್ಮ ದೇವಿ ವರಲಕ್ಷ್ಮಿ
ಶುಕ್ರವಾರದ ಶುಭ ಸಂಜೆಯ ಘಳಿಗೆಗೆ
ಬಾರಮ್ಮ ತಾಯಿ ಭಕ್ತರ ಮನೆ ಮನೆಗೆ ||
ಸಂಭ್ರಮ ಸಡಗರದಿ ಬಂದಿದೆ ಶ್ರಾವಣ ಮಾಸ
ಹೆಂಗಳೆಯರ ಮೊಗದಲಿ ಮೂಡಿದೆ ಮಂದಹಾಸ
ಮಹಾಲಕ್ಷ್ಮಿಯು ಬರುವಳು ವರವನು ನೀಡುತ
ಹರಸಿ ಹಾರೈಸಮ್ಮಾ ತಾಯೇ ಅನವರತ ||
ಸಂಸಾರ ಸಾಗರದಿ ಇರಲು ದುಃಖದ ಬಾಳು
ನಿನ್ನ ಕೃಪೆಯೊಂದಿರಲು ನಮಗಿಲ್ಲ ಸೋಲು
ಜಗದೋದ್ಧಾರಿಣಿ ಜಗದೀಶ್ವರಿ ಶ್ರೀ ಜನನಿ
ನಿನ್ನ ಪಾಡುತಲಿಹರು ಭಕ್ತ ವೃಂದ ಜಯವರ್ಧಿನಿ ||
ಬದುಕಿಗೆ ನಿನ್ನ ಅಭಯ ಇರಲು
ಸಕಲ ಸೌಭಾಗ್ಯಕ್ಕೂ ನೀನೇ ಕಣ್ಗಾವಲು
ಭವ ಭಯ ಬಹುದೂರ ನಿನ್ನ ಧ್ಯಾನದಿ
ನೀನೆಲೆಸುವಾ ಮನೆ ಸುಖ, ಶಾಂತಿ, ನೆಮ್ಮದಿ||
-ಶೋಭಾ ಮಲ್ಕಿ ಒಡೆಯರ್, ಹೂವಿನ ಹಡಗಲಿ