ಅನುದಿನ ಕವನ-೧೬೯೦, ಕವಯತ್ರಿ: ಮಮತಾ ಅರಸೀಕೆರೆ

ಒಲುಮೆಯೊಂದು ಬಳಿ
ಬರಲು ಕಾಯುತಿದೆ
ಆಸೆ ಹಲವು ಮನಕೆ
ನಲುಮೆಯೊಂದು ಬಳಸು
ದಾರಿಯಲಿ ನಿಂತಿದೆ
ಏನು ಹೇಳಲಿ ಅದಕೆ

ಸುಪ್ತ ಬಯಕೆ
ಗರಿಗೆದರಿ ಧಾವಿಸಿದೆ
ನವಿರಾಗಿ ಸವರಲೆಂದೆ
ತನುವ
ತಪ್ತ ಸಾಗರ ದಾಟಿ
ಹಾಯ್ದಿದೆ
ಕನಸು ಹಿಡಿಯಲೆಂದೆ
ಕರವ

ನೆಲವ ತಾಕದೆ ಬರಡು
ಎಲೆಗಳು
ಮತ್ತೆ ಚಿಗುರಿವೆ
ಹರುಷಕೆ
ನಿನ್ನ ಕಾಣ್ಕೆಯು
ಅಪ್ಪಿಕೊಂಡಿದೆ
ಸಾಕಿನ್ನೇನು ಬೇಕು ಜನುಮಕೆ

ದಾಟಿ ಸವರಿ ಎಲ್ಲ ಗಡಿ
ನವಿರಾಗಿ
ಕೂಡುವಾಟ ಬೇಕಿದೆ
ದೇಹಕೆ

ಬೆಚ್ಚಿಬೀಳಲಿ ಬಿಡು
ಈ ಜಗತ್ತು
ನಮ್ಮ ಬಯಕೆಯ ಪರಿಗೆ,
ಮೈಮರೆವಿನ ಸೊಬಗಿಗೆ


-ಮಮತಾ ಅರಸೀಕೆರೆ, ಅರಸೀಕೆರೆ
—–