‘ಸನಾದಿ ಅಪ್ಪಣ್ಣ’ ಚಿತ್ರದಲ್ಲಿನ ಡಾ.ರಾಜ್ ನಟನೆಗೆ ಫಿದಾ ಆಗದೇ ಇರೋರು ಯಾರಾದ್ರೂ ಇದ್ದೀರಾ? ಊಹೂಂ…
ಕನ್ನಡ ಚಿತ್ರರಂಗದಲ್ಲಿ ಇಂದಿಗೂ ಚಿತ್ರರಸಿಕರ ಮನಸ್ಸಲ್ಲಿ ಅಚ್ಚಳಿಯದೇ ಉಳಿದಿರುವ ಆ ‘ಕರೆದರೂ ಕೇಳದೇ….’ ಹಾಡು ಮತ್ತದರ ರಾಗಸಂಯೋಜನೆ ನಿಜಕ್ಕೂ ಕಲ್ಲಿಗೂ ಕೂಡ ಸಂಗೀತದ ರುಚಿ ಹಚ್ಚುವಂತದು. ಸ್ವರ ಸಾಮ್ರಾಟ್ ಜಿ.ಕೆ.ವೆಂಕಟೇಶ ಅವರ ರಾಗಸಂಯೋಜನೆಯಲ್ಲಿ ಮೂಡಿ ಬಂದ ಈ ಹಾಡು ಕೇಳಿದವರೆಲ್ಲ ಸಂಗೀತ ಲೋಕದ ದಂತಕಥೆಯಾದ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರನ್ನು ನೆನಪಿಗೆ ತರದೇ ಇರಲಾರದು.
ಹೌದು! ಈ ಚಿತ್ರದ ಹಾಡಿನಲ್ಲಿ ಬಳಕೆಯಾದ ಶಹನಾಯಿ ವಾದ್ಯಕ್ಕೆ ಸ್ವತಃ ‘ಬಿಸ್ಮಿಲ್ಲಾ ಖಾನ್’ ರೇ ಉಸಿರು ನೀಡಿದ್ದು ಸ್ಮರಣೀಯ.
ಬಿಹಾರದ ಪೈಗಂಬರಖಾನ್ ಹಾಗೂ ಮಿತ್ತನ್ ದಂಪತಿಗಳ ಉದರದಲ್ಲಿ ಸಂಗೀತದ ಕುಟುಂಬದಲ್ಲಿ 1916 ರ ಮಾರ್ಚ್ 22ರಂದು ಜನಿಸಿದ ಬಿಸ್ಮಿಲ್ಲಾಖಾನ್ ರವರು ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದರೂ ಕಾಶಿ ವಿಶ್ವನಾಥನ ಮಂದಿರದ ನಿಕಟ ಸಂಪರ್ಕದಿಂದಾಗಿ ಹಿಂದೂಗಳೊಂದಿಗೆ ಬೆರೆತು ಬಾಳಿದವರು.
ಶಹನಾಯಿಯನ್ನು ಶಾಸ್ತ್ರೀಯ ಸಂಗೀತದ ವಾದ್ಯವನ್ನಾಗಿಸಿದ ಕೀರ್ತಿ ಖಾನ್ ರಿಗೆ ಸಲ್ಲತಕ್ಕದ್ದು.
ಒಂದು ಸಲ ಕುಂಭ ಮೇಳದ ಕಾರ್ಯಕ್ರಮವೊಂದಕ್ಕೆ ಭಾಗಿಯಾಗಲು ರೈಲಿನಲ್ಲಿ ಹೊರಟ ಬಿಸ್ಮಿಲ್ಲಾ ಖಾನ್ ರವರು ಇದ್ದ ರೈಲಿನ ಭೋಗಿಯೊಂದರಲ್ಲಿ ಗೋಪಾಲಕನೊಬ್ಬ ಅತ್ಯಂತ ಸೊಗಸಾಗಿ ಕೊಳಲು ನುಡಿಸುವುದನ್ನು ಆಲಿಸುತ್ತ ಪುನಃ ಪುನಃ ತನ್ನಲ್ಲಿರುವ ಎಲ್ಲ ನಾಣ್ಯಗಳನ್ನು ಆತನ ಕೈಗೆ ಒಂದೊಂದಾಗಿ ನೀಡುತ್ತ ಆತನ ಕೊಳಲ ನಾದಕ್ಕೆ ಪ್ರೀತ್ಯರ್ಥನಾಗಿ ಕಾರ್ಯಕ್ರಮದಲ್ಲಿ ಆ ರಾಗವನ್ನೇ ಸೊಗಸಾಗಿ ನುಡಿಸಿದ್ದು ಪ್ರೇಕ್ಷಕರಿಗೆ ಬಹಳ ಮೆಚ್ಚುಗೆಯಾಯಿತು. ಪುನಃ ಪ್ರೇಕ್ಷಕರು ಆ ರಾಗವನ್ನೇ ನುಡಿಸುವಂತೆ ಕೇಳಿಕೊಂಡಿದ್ದು ಆ ರಾಗಕ್ಕೆ ಕನ್ಹೇರ ರಾಗ ಅಂತ ಅವರೇ ಹೆಸರು ಕೊಟ್ಟಿದ್ದು ಮಾರನೇಯ ದಿನ ಹೊಸದೊಂದು ರಾಗದ ಸೃಷ್ಟಿಗೆ ಕಾರಣರಾದ ಖಾನ್ ಎಂಬ ಖ್ಯಾತಿಗೆ ಆ ಗೋಪಾಲಕ ಹುಡುಗನ ನೆನಪಿಸಿಕೊಂಡು ಕೃತಜ್ಞತೆಯನ್ನು ಸಲ್ಲಿಸಿದ್ದು ಇಡೀ ದೇಶದಲ್ಲೇ ದೊಡ್ಡ ಸುದ್ದಿಯಾಗಿತ್ತು.
ಉಸ್ತಾದ್ ಸಂಗೀತ ಲೋಕದ ದಂತ ಕಥೆಯಾಗಿದ್ದು ‘ಭಾರತರತ್ನ’ ಪ್ರಶಸ್ತಿಗೆ ಭಾಜನರಾದ ಮೂರನೇ ಸಂಗೀತಗಾರರಾಗಿದ್ದಾರೆ. ಪದ್ಮಶ್ರೀ ಸೇರಿದಂತೆ ದೇಶದ ಅತ್ಯುನ್ನತ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ಮೇರು ದಿಗ್ಗಜ ಸಂಗೀತ ಮಾಂತ್ರಿಕ ಬಿಸ್ಮಿಲ್ಲಾ ಖಾನ್ ರಿಗೆ ಹಲವಾರು ವಿಶ್ವವಿದ್ಯಾಲಯಗಳು ಗೌರವ ಡಿ.ಲಿಟ್ ನೀಡಿ ಗೌರವಿಸಿವೆ.
ಇಂತಹ ಧೀಮಂತ ಸಂಗೀತ ಮಾಂತ್ರಿಕ 2006ರ ಆಗಸ್ಟ್ 21 ರಂದು ತಮ್ಮ ಕೂನೆಯುಸಿರು ಎಳೆದರು. ಅವರ ಆ ಮಾಂತ್ರಿಕ ಶಹನಾಯಿ ಧ್ವನಿ ಈಗಲೂ ಯಾವಾಗಲೂ ಸಂಗೀತಾಸಕ್ತ ಕಿವಿಗಳಲ್ಲಿ ಗುಂಯ್ಯಗುಡುತ್ತಲೇ ಇರುತ್ತದೆ.
ಹಾಡು ಸಂಗೀತ ಅಂತ ಆಗಾಗ್ಗೆ ಗುಣುಗುಣಿಸುತ್ತಲೇ ಇರುವ ನನಗೆ ಅವರ ಶಹನಾಯಿ ನಾದವೂ ಒಂದು ಗುರುವಂತೆಯೇ ಸರಿ ಸೋ ನನ್ನಿಷ್ಟದ ಶಹನಾಯಿ ಮಾಂತ್ರಿಕ
🙏ಉಸ್ತಾದ್ ಬಿಸ್ಮಿಲ್ಲಾಖಾನ್ ರವರ ಸ್ಮರಣೀಯ ದಿನದ ಇಂದು ಅವರಿಗೆ ಭಕ್ತಿಪೂರ್ವಕ ನಮನಗಳು….🙏
-✍ಸಿದ್ದರಾಮ ತಳವಾರ, ದಾಸ್ತಿಕೊಪ್ಪ