ಅನುದಿನ ಕವನ-೧೭೧೫, ಕವಯತ್ರಿ: ವಿನುತಾ ಎಸ್, ಬೆಳಗಾವಿ ✍️

ಪ್ರೇಮವೆಂಬುವುದು
ಎಲ್ಲ ಎಲ್ಲೆಗಳಾಚೆಗಿನದ್ದು
ಎಂದು ತಿಳಿದದ್ದು
ನೀ ದಕ್ಕಿದ ನಂತರವೇ
ಇಲ್ಲಿ ಸರಿ ತಪ್ಪು, ಪಾಪ ಪುಣ್ಯ,
ಸ್ವರ್ಗ ನರಕಗಳೆಂಬ ರೇಖೆಗಳಿಲ್ಲ.

*********

ನನ್ನೆದೆಯ ಮಾತುಗಳಿಗೀಗ
ಧ್ವನಿ ಮೂಡಿದೆ,
ಹಾಡುವುದು, ಗುನುಗುವುದು,
ಮತ್ತೆ ಮತ್ತೆ ನಿನ್ನನ್ನೇ
ಇನ್ನಷ್ಟು ಬಲವಾಗಿ
ಬದುಕುವುದು ರೂಢಿಯಾಗಿದೆ.

*********

ಖಾಲಿ ಹಾಳೆಯಂತ ಬದುಕಲ್ಲಿ
ಮೂಡಿದ ಚಿತ್ರ ನೀನು,
ಇಲ್ಲಿ ಎಲ್ಲ ಬಣ್ಣಗಳಿಗೂ
ನಿನ್ನದೇ ರಂಗಿದೆ.
ನಿನ್ನುಸಿರ ಘಮಕ್ಕೆ
ನನ್ನುಸಿರ ಹೆಸರಿದೆ.

*********

ಮುಳುಗುವ ಕುರಿತು
ಭಯವಿಲ್ಲ ನನ್ನಲ್ಲೀಗ,
ಸಮುದ್ರದಂತ ಪ್ರೇಮಕ್ಕಿಂತ
ಆಳವಾದದ್ದೇನೂ
ಇರಲಾರದು ಈ ಜಗತ್ತಲ್ಲಿ.

*********

ನೀ ದಕ್ಕದ ಕುರಿತ
ಭಯಕ್ಕಿಂತ
ಬೇರೆ ನೋವುಗಳೇ ಕಾಣಲಿಲ್ಲ
ಈ ಕುರುಡು ಕಣ್ಣಿಗೆ.
ನೀ ನನ್ನೆಲ್ಲ ನೋವಿನ
ಶಾಶ್ವತ ಪರಿಹಾರ;
ಸಂತೈಸುವ ಹೆಗಲು.

*********

ನಂಬಿಕೆಗಳ ಮೇಲೆ ನಂಬಿಕೆ ಮೂಡಿದ್ದು
ನೀ ಸಿಕ್ಕ ನಂತರವೇ,
ಪ್ರಾರ್ಥನೆಗಳೂ ಫಲಿಸುತ್ತವೆಂದು
ಸಾಬೀತು ಪಡಿಸಲು
ಯಾವ ದೇವರೋ ತಥಾಸ್ತು ಅಂದಿರಬೇಕು,
ನಾ ನಿನ್ನ ಕುರಿತು ಪ್ರಾರ್ಥಿಸಿದಾಗಲೆಲ್ಲಾ.

-ವಿನುತಾ ಎಸ್, ಬೆಳಗಾವಿ ✍️