ವಿಜಯನಗರ(ಹೊಸಪೇಟೆ), ಸೆ.10: ವಿಜಯನಗರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾಗಿ ಕವಿತಾ ಎಸ್ ಮನ್ನಿಕೇರಿ ಐಎಎಸ್ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ವರ್ಗಾವಣೆಗೊಂಡಿರುವ ಜಿಲ್ಲಾಧಿಕಾರಿ ದಿವಾಕರ ಅವರು ಕವಿತಾ ಅವರಿಗೆ ಅಧಿಕಾರ ಹಸ್ತಾಂತರಿಸಿ ಶುಭ ಕೋರಿದರು.
ಪರಿಚಯ: ಕೆಎಎಸ್ ಉತ್ತೀರ್ಣರಾದ ಬಳಿಕ 2007ರಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿ ಮಂಡ್ಯದಲ್ಲಿ ಸೇವೆ ಆರಂಭಿಸಿದ ಕನ್ನಡತಿ ಕವಿತಾ ಮನ್ನಿಕೇರಿ ಅವರು ಬಳಿಕ ಸೇಡಂನ ಉಪವಿಭಾಗಾಧಿಕಾರಿಯಾದರು. ಯಾದಗಿರಿಯಲ್ಲಿ ಉಪವಿಭಾಗಾಧಿಕಾರಿಯಾಗಿ ಅನುಭವ ಗಳಿಸಿ ನಂತರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಕವಿತಾ ಅವರು 2012ರಲ್ಲಿ ಐಎಎಸ್ ಅಧಿಕಾರಿಯಾಗಿ ಬಡ್ತಿ ಪಡೆದರು. ವಿಜಯಪುರ ಎಡಿಸಿಗಳಾಗಿ ಬಳಿಕ ಮಹಿಳಾ ಆಯೋಗದ ಕಾರ್ಯದರ್ಶಿಯಾಗಿ, ಯಾದಗಿರಿ ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಕೆಎಸ್‌ಆರ್‌ಟಿಸಿ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಳಿಕ ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿ 2 ವರ್ಷ ಕರ್ತವ್ಯ ನಿರ್ವಹಿಸಿ ನಂತರ ಕೆಎಚ್‌ಬಿ ಆಯುಕ್ತರಾಗಿ ಆಡಳಿತದಲ್ಲಿ ಅಪಾರ ಅನುಭವಗಳಿಸಿದ್ದಾರೆ. ವಿಜಯನಗರ ಜಿಲ್ಲೆಯ ಪ್ರಥಮ ಮಹಿಳಾ ಜಿಲ್ಲಾಧಿಕಾರಿ ಎಂಬ ಹೆಗ್ಗಳಿಕೆಗೂ ಕವಿತಾ ಅವರು ಪಾತ್ರರಾಗಿದ್ದಾರೆ.