ಬಳ್ಳಾರಿ: ಅತಿ ಶೀಘ್ರ ಫಲಾನುಭವಿಗಳಿಗೆ 1000 ಮನೆಗಳ ಹಸ್ತಾಂತರ -ಶಾಸಕ ನಾರಾ ಭರತ್ ರೆಡ್ಡಿ

ಬಳ್ಳಾರಿ, ಸೆ.11: ನಗರದ ಮುಂಡ್ರಿಗಿ ಬಳಿಯ ಬಹು ನಿರೀಕ್ಷಿತ ರಾಜೀವ್ ಗಾಂಧಿ ಟೌನ್’ಶಿಪ್ ಯೋಜನೆ ಅಡಿ ಈಗಾಗಲೇ ಪೂರ್ಣಗೊಳ್ಳಲಿರುವ 1000 ಮನೆಗಳನ್ನು ಫಲಾನುಭವಿಗಳಿಗೆ ಶೀಘ್ರದಲ್ಲೇ ವಿತರಣೆ ಮಾಡಲಾಗುವುದು ಎಂದು ಶಾಸಕ ನಾರಾ ಭರತ್ ತಿಳಿಸಿದ್ದಾರೆ.

ಗುರುವಾರ ಬೆಳಿಗ್ಗೆ ಬಳ್ಳಾರಿ ಹೊರ ವಲಯದ ಮುಂಡ್ರಿಗಿ ಗ್ರಾಮದ ಬಳಿಯ ವಸತಿ ಸಮುಚ್ಛಯಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ತದನಂತರ ಪೂರ್ಣಗೊಂಡಿರುವ ಮನೆಗಳ ವ್ಯವಸ್ಥೆಯನ್ನು ಪರಿಶೀಲಿಸಿದರು.


ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಆಯುಕ್ತ ಮಂಜುನಾಥ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದು ಮನೆಗಳ ನಿರ್ಮಾಣ, ಹಂಚಿಕೆ ಕುರಿತು ಶಾಸಕರಿಗೆ ಮಾಹಿತಿ ನೀಡಿದರು.
ಮನೆ ಪಡೆಯಲು ಈಗಾಗಲೇ ಹಲವು ಫಲಾನುಭವಿಗಳು ಸರ್ಕಾರ ನಿಗದಿ ಮಾಡಿರುವ ಹಣವನ್ನು ಸಂದಾಯ ಮಾಡಿದ್ದಾರೆ, ಆದರೆ ಮನೆಗಳನ್ನು ಉಚಿತವಾಗಿ ನೀಡಲು ಈಗಾಗಲೇ ವಸತಿ ಸಚಿವ ಜಮೀರ್ ಅಹ್ಮದ್ ಅವರೊಂದಿಗೆ ಚರ್ಚಿಸಲಾಗಿದ್ದು, ಸರ್ಕಾರವೇ ಫಲಾನುಭವಿಗಳ ಹಣವನ್ನು ಕಟ್ಟಿ, ಶೇ.100ರಷ್ಟು ಉಚಿತವಾಗಿ ಮನೆ ಹಂಚುವ ಉದ್ಧೇಶ ಇದೆ ಎಂದರು.
ಅಪೂರ್ಣ ಇರುವ ಮನೆಗಳ ನಿರ್ಮಾಣ ಪೂರ್ಣಗೊಳಿಸಿ ಪ್ರಾಥಮಿಕ ಹಂತದಲ್ಲಿ 1000 ಮನೆಗಳನ್ನು ಏಕ ಕಾಲಕ್ಕೆ ಹಂಚಿಕೆ ಮಾಡುವ ಯೋಚನೆ ಇದೆ ಎಂದು ತಿಳಿಸಿದ ಶಾಸಕ ನಾರಾ ಭರತ್ ರೆಡ್ಡಿ, ಸಿಎಂ ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ ಅವರ ಸಾರಥ್ಯದಲ್ಲಿ ಮನೆ ವಿತರಣೆ ಕಾರ್ಯಕ್ರಮಕ್ಕೆ ದಿನಾಂಕ ನಿಗದಿ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮುಖಂಡ ಚಾನಾಳ್ ಶೇಖರ್ ಮತ್ತಿತರರು ಇದ್ದರು.